ADVERTISEMENT

ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ

ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠ ತೊರೆದರೆ ಸಂತೋಷ: ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 0:30 IST
Last Updated 20 ಜುಲೈ 2025, 0:30 IST
<div class="paragraphs"><p>ವಿಜಯಾನಂದ ಕಾಶಪ್ಪನವರ</p></div>

ವಿಜಯಾನಂದ ಕಾಶಪ್ಪನವರ

   

ಹುಬ್ಬಳ್ಳಿ: ‘ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿಯನ್ನು ನೇಮಕ ಮಾಡಲು ನಿರ್ಧರಿಸಲಾಗಿದ್ದು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಾಗಿಯೇ ಪೀಠ ತೊರೆದರೆ ಸಂತೋಷ’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

‘ಸ್ವಾಮೀಜಿ ಅವರ ವರ್ತನೆ, ನಡವಳಿಕೆಯಲ್ಲಿ ತೀವ್ರ ಬದಲಾವಣೆಯಾಗಿದೆ. ಸಮಾಜದ ಹಿರಿಯರು ಸಭೆ ನಡೆಸಿ ಪರ್ಯಾಯ ಗುರುಗಳ ನೇಮಕದ ಬಗ್ಗೆ ಚರ್ಚಿಸಿದ್ದಾರೆ. ಮೃತ್ಯುಂಜಯ ಸ್ವಾಮೀಜಿ ಅವರನ್ನು ಮಠ ಬಿಟ್ಟು ಹೋಗಿ ಎಂದು ನಾವಾಗಿಯೇ ಹೇಳುವುದಿಲ್ಲ‌. ಅವರಾಗಿಯೇ ಹೋದರೆ ಸಂತೋಷ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಸಮಾಜದ ಅಭಿವೃದ್ಧಿಗಾಗಿ ಟ್ರಸ್ಟ್ ರಚಿಸಿ, 2008ರಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಲಿಂಗಾಯತ ಪಂಚಮಸಾಲಿ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಸವತತ್ವ ಪ್ರಚಾರಕ್ಕೆ ಆದ್ಯತೆ ನೀಡಬೇಕಿದ್ದ ಸ್ವಾಮೀಜಿ, ರಾಜಕೀಯ‌ ಪಕ್ಷದ ಬ್ಯಾನರ್ ಅಡಿ ಕೂತುಕೊಳ್ಳುವುದು, ವರ್ಗಾವಣೆಗೆ ಶಿಫಾರಸ್ಸು ಮಾಡುವುದು, ಯಾವುದೋ ಒಬ್ಬ ವ್ಯಕ್ತಿ ಪರ ಮಾತನಾಡುವುದು ಮಾಡುತ್ತಿದ್ದಾರೆ. ಮಠದಲ್ಲಿ ವಾಸ್ತವ್ಯ ಮಾಡದೆ ಊರೂರು ಅಡ್ಡಾಡುತ್ತ, ಮೊಬೈಲ್‌ನಲ್ಲಿ ಮಾತನಾಡುತ್ತ ಪ್ರಚಾರದ ಹಿಂದೆ ಬಿದ್ದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಟ್ರಸ್ಟ್ ಬೈಲಾ ಪ್ರಕಾರ ಸ್ವಾಮೀಜಿ ಸ್ವಂತ ಆಸ್ತಿ ಹೊಂದುವಂತಿಲ್ಲ. ಅದರೆ, ಬೆಳಗಾವಿಯಲ್ಲಿ ಎರಡು ಮನೆ, ಹುಬ್ಬಳ್ಳಿ-ಬೆಂಗಳೂರಲ್ಲಿ ತಲಾ ಒಂದೊಂದು ಮನೆ ಅವರ ಹೆಸರಲ್ಲಿ ಇವೆ. ಮಲಪ್ರಭಾ ದಂಡೆ ಮೇಲೆ ಮಠ ಕಟ್ಟುತ್ತೇನೆ, ಸಂಸ್ಥೆ ಕಟ್ಟಿ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸುತ್ತೇನೆ ಎಂದು ಸ್ವಾಮೀಜಿ ಹೇಳುತ್ತಿರುವುದು ಬೈಲಾ ವಿರುದ್ಧವಾಗಿದೆ. ಟ್ರಸ್ಟ್‌ಗೆ ನಾವೇ ವಾರಸ್ದಾರರಾಗಿದ್ದು, ಪೀಠವನ್ನು ಮುನ್ನಡೆಸಿ
ಕೊಂಡು ಹೋಗಲಷ್ಟೇ ಸ್ವಾಮೀಜಿಯನ್ನು ನೇಮಕ‌ಮಾಡಿದ್ದು’ ಎಂದರು.

‘ಸ್ವಾಮೀಜಿ ಅವರ ಪ್ರಚೋದನೆಯಿಂದಲೇ ಕೆಲ ದಿನಗಳ ಹಿಂದೆ ಕೆಲವರು ಮಧ್ಯರಾತ್ರಿ ಬಂದು ಮಠದ ಗೇಟ್ ಒಡೆದು ಅಕ್ರಮ ಪ್ರವೇಶ ಮಾಡಿದ್ದಾರೆ. ಆ ಕುರಿತು ಪ್ರಕರಣ ದಾಖಲಿಸಲಾಗಿದೆ. ಮಠದ ರಕ್ಷಣೆಗೆ ಟ್ರಸ್ಟ್‌ ಅಧ್ಯಕ್ಷನಾಗಿ ಬೀಗ ಹಾಕಿದ್ದನ್ನೇ ಸ್ವಾಮೀಜಿ ಅವರು ತಪ್ಪು ತಿಳಿದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಕಾಶಪ್ಪನವರ ಸ್ಪಷ್ಟಪಡಿಸಿದರು.

‘ನಾಯಿ, ನರಿಗಳು ಮಠಕ್ಕೆ ಬರುತ್ತಿದ್ದವು’

‘2019ರಲ್ಲಿ ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಂಡಾಗ ನೋಟಿಸ್ ನೀಡಲಾಗಿತ್ತು. ತಪ್ಪು ತಿದ್ದಿಕೊಂಡು ಮುನ್ನಡೆಯುತ್ತೇನೆ ಎಂದು ಅವರು ತಪ್ಪೊಪ್ಪಿಗೆ ಪತ್ರ ಕೊಟ್ಟಿದ್ದರು. ಆದರೂ, ಅವರು ಮಠದಲ್ಲಿ ಸರಿಯಾಗಿ ಇರದೆ, ಸಂಚಾರದಲ್ಲಿ ನಿರತರಾಗುತ್ತಿದ್ದರು. ಭಕ್ತರಿಗೆ ದರ್ಶನವಾಗುತ್ತಿರಲಿಲ್ಲ. ಆಗಾಗ, ಮಠಕ್ಕೆ ನರಿ, ನಾಯಿಗಳು ಬರುತ್ತಿದ್ದವು. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಟ್ರಸ್ಟ್ ಅಧ್ಯಕ್ಷನಾಗಿ ಮಠದ ರಕ್ಷಣೆಗೆ ಹಿರಿಯರೊಂದಿಗೆ ಚರ್ಚಿಸಿ ನಾನೇ ಗೇಟ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೆ’ ಎಂದು ಕಾಶಪ್ಪನವರ ವಿವರಿಸಿದರು.

ಆಸ್ಪತ್ರೆಗೆ ದಾಖಲಾದ ಸ್ವಾಮೀಜಿ

ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಲೆನೋವು, ವಾಂತಿ, ಎದೆನೋವು ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತುರ್ತು ನಿಗಾ ಘಟಕದಲ್ಲಿ ತಪಾಸಣೆ ಮಾಡಿ, ನಂತರದಲ್ಲಿ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ.

‘ಆಹಾರದಲ್ಲಿ ವ್ಯತ್ಯಾಸವಾಗಿ ಆರೋಗ್ಯ ಏರುಪೇರಾಗಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಸ್ವಾಮೀಜಿ ಆರೋಗ್ಯವಾಗಿದ್ದಾರೆ' ಎಂದು ಪಂಚಮಸಾಲಿ ಸಮಾಜದ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಪಾಟೀಲ ಹೇಳಿದರು.

‘ಇಸಿಜಿ ಸೇರಿದಂತೆ ವಿವಿಧ ತಪಾಸಣೆ ಮಾಡಲಾಗಿದ್ದು, ಯಾವುದೇ ತೊಂದರೆ ಇಲ್ಲ. ವಿಶ್ರಾಂತಿ ಅವಶ್ಯಕತೆ ಇದೆ. ನಾಳೆ ಆಸ್ಪತ್ರೆಯಿಂದ ಬಿಡುಗಡೆ ಆಗಬಹುದು’ ಎಂದು ಡಾ.ಕ್ಷಮಿತಾ ಕೆರೂಡಿ ತಿಳಿಸಿದರು.

‘ಮೀಸಲಾತಿ ಸ್ಪಷ್ಟಪಡಿಸಲಿ’

ಹುಬ್ಬಳ್ಳಿ: ‘ಬಿಜೆಪಿಯ ರಾಜ್ಯದ ಅಗ್ರಗಣ್ಯ ನಾಯಕರೊಬ್ಬರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಸಿಕ್ಕಿದೆ ಎನ್ನುತ್ತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಬೇಕೋ, 2ಎ ಮೀಸಲಾತಿ ಬೇಕೋ ಎಂದು ಅವರು ಸ್ಪಷ್ಟಪಡಿಸಲಿ’ ಎಂದು ವಿಜಯಾನಂದ ಕಾಶಪ್ಪನವರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆಯಿದ್ದು, ತೆರವಾದ ನಂತರ ಅಸ್ತಿತ್ವ ಕಳೆದುಕೊಳ್ಳಲಿದೆ. ಈ ವಿಷಯ ತಿಳಿದು ಸಹ ಮೀಸಲಾತಿ ಕೊಡಿಸಿದ್ದೇವೆ ಎಂದು ಅಗ್ರಗಣ್ಯ ನಾಯಕ ಹೇಳುತ್ತಿದ್ದಾರೆ’ ಎಂದು ಯತ್ನಾಳ ಅವರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

‘ಅಲ್ಪಸಂಖ್ಯಾತರ ಮೀಸಲಾತಿ ಕಸಿದು ನಮಗೆ ನೀಡಲಾಗಿದೆ. ಹೀಗೆ ಹೇಳುವ ನಾಯಕರು ಗೊಂದಲ ಸೃಷ್ಟಿಸದೆ, 2ಡಿ ಮೀಸಲಾತಿ ಬೇಕೋ, 2ಎ ಮೀಸಲಾತಿ ಬೇಕೋ ಎನ್ನುವುದು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಎಲ್ಲಾ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ, ಶೀಘ್ರ ಸಿಎಂ ಭೇಟಿ ಮಾಡಿ ಶಿಫಾರಸ್ಸಿಗೆ ಆಗ್ರಹಿಸುತ್ತೇವೆ‌. ಜಾತಿಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು, ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಬರೆಸಬೇಕು‌’ ಎಂದು ಸಲಹೆ ನೀಡಿದರು.

ಸ್ವಾಮೀಜಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎನ್ನುವುದು ಸಹ ಪ್ರಚಾರದ ಗಿಮ್ಮಿಕ್ಕು ಆಗಿರಬಹುದು‌‌. ಅವರು ಈಗಾಗಲೇ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ
ವಿಜಯಾನಂದ ಕಾಶಪ್ಪನವರ, ಅಧ್ಯಕ್ಷ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.