ADVERTISEMENT

ಕಾಂಗ್ರೆಸ್‌ನಲ್ಲಿ ‘ಧರ್ಮ’ ಯುದ್ಧ

ಲಿಂಗಾಯತ ಸ್ವತಂತ್ರ ಧರ್ಮ ‌ವಿಚಾರದಲ್ಲಿ ‘ಕೈ’ ಹಾಕಬಾರದಿತ್ತು: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:27 IST
Last Updated 19 ಅಕ್ಟೋಬರ್ 2018, 19:27 IST
   

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ‌ವಿಚಾರಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷವಾದ ಕಾಂಗ್ರೆಸ್‌ ಪಾಳಯದಲ್ಲಿ ಮತ್ತೊಂದು ಸುತ್ತಿನ ‘ಧರ್ಮ’ ಸಂಘರ್ಷ ಆರಂಭವಾಗಿದೆ.

‘ಧರ್ಮ ‌ವಿಚಾರದಲ್ಲಿ ಕೈ ಹಾಕಬಾರದಿತ್ತು. ನಾವು (ಕಾಂಗ್ರೆಸ್) ಮಾಡಿರುವ ತಪ್ಪಿನ ಅರಿವು ನಮಗೆ ಆಗಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಗುರುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷದ ಮುಖಂಡರಲ್ಲಿ ವಾಗ್ದಾದ ಶುರುವಾಗಿದೆ.

‘ಧರ್ಮ ವಿಚಾರಕ್ಕೆ ಕೈ ಹಾಕಿ ಸಿದ್ದರಾಮಯ್ಯ ಸರ್ಕಾರ ಕೈ ಸುಟ್ಟುಕೊಂಡಿದೆ. ಶಿವಕುಮಾರ್ ಸತ್ಯ ಹೇಳಿದ್ದಾರೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರತಿಕ್ರಿಯಿಸಿದರೆ, ‘ಸ್ವತಂತ್ರ ಧರ್ಮ ಹೋರಾಟ ಪರ ನಿಂತ ಕಾರಣಕ್ಕೆ ಕಾಂಗ್ರೆಸ್‍ಗೆ ಸೋಲಾಗಿದೆ ಎಂಬ ಅಭಿಪ್ರಾಯ ತಪ್ಪು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಈ ಬಗ್ಗೆ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಲು ತೀರ್ಮಾನಿಸಿದೆ.

ADVERTISEMENT

ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬುಧವಾರ ನಡೆದ ರಂಭಾಪುರಿ ಶ್ರೀಗಳ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಶಿವಕುಮಾರ್, ‘ಸ್ವತಂತ್ರ ಧರ್ಮ ಹೋರಾಟದಿಂದ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಇದಕ್ಕಾಗಿ ಸಮುದಾಯದ ಕ್ಷಮೆ ಕೇಳುತ್ತೇನೆ’ ಎಂದಿದ್ದರು.

ಇದಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಎಂ.ಬಿ.ಪಾಟೀಲ, ‘ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ರಾಜಕಾರಣವೇ ಬೇರೆ, ಧರ್ಮವೇ ಬೇರೆ’ ಎಂದು ತಿರುಗೇಟು ಕೊಟ್ಟಿದ್ದಾರೆ.

‘ಶಿವಕುಮಾರ್‌ ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ದಕ್ಷಿಣ ಕರ್ನಾಟಕದ ನಾಯಕರಾಗಿ ಅವರು ಎಷ್ಟು ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಕುಟುಕಿರುವ ಪಾಟೀಲ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ಶಿವಕುಮಾರ್‌ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ’ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.

ಶಿವಕುಮಾರ್‌ ಹೇಳಿದ್ದೇನು?: ಮಾಧ್ಯಮ ಪ್ರತಿನಿಧಿಗಳ ಜೊತೆ ಗುರುವಾರ ಮಾತನಾಡಿದ ಶಿವಕುಮಾರ್‌, 'ಸರ್ಕಾರ ಇಂತಹ ಕಾರ್ಯದಲ್ಲಿ ಭಾಗಿ ಆಗಬಾರದಿತ್ತು. ಇದು ನನ್ನ ಆತ್ಮಸಾಕ್ಷಿಯ ಮಾತು. ಕೆಲವು ಸ್ನೇಹಿತರು ಸ್ವತಂತ್ರ ಧರ್ಮದ ಪರವಾಗಿ ಕೆಲಸ ಮಾಡಿದ್ದರು. ಜನರ ತೀರ್ಪು ನೋಡಿದರೆ ನಾವು ಯಾರು ಪರ ನಿಂತಿದ್ದೆವೋ ಅದಕ್ಕೆ ವಿರುದ್ಧವಾಗಿದೆ. ಇದನ್ನು ಯಾರಾದರೂ ಹೇಗೆ ಬೇಕಾದರೂ ವ್ಯಾಖ್ಯಾನಿಸಲಿ. ಆದರೆ, ಕೆಲವರು ಈಗಲೂ ತಮ್ಮ ವಾದವೇ ಸರಿ ಎನ್ನುತ್ತಿದ್ದಾರೆ' ಎಂದಿದ್ದರು. ಆ ಮೂಲಕ, ಪರೋಕ್ಷವಾಗಿ ಎಂ.ಬಿ. ಪಾಟೀಲ, ವಿನಯಕುಲಕರ್ಣಿ ಅವರನ್ನು ಕೆಣಕಿದ್ದರು.

'ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನಕ್ಕೆ ಮನ್ನಣೆ ಕೊಡಬೇಕಾಗುತ್ತದೆ. ತಪ್ಪುಗಳು ಮಾಡುವಾಗ ತಪ್ಪೆಂದು ಒಪ್ಪಿಕೊಳ್ಳಬೇಕು. ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯಗೆ ಮನವರಿಕೆ ಮಾಡಿದ್ದರು. ತಪ್ಪು ಮಾಡಿ ಅದರ ಫಲ ಉಂಡಿದ್ದೇವೆ' ಎಂದೂ ಹೇಳಿದ್ದರು.

**

‘ಒಡೆಯುವ ಕೆಲಸ ಕೈ ಬಿಡಲಿ’

ದಾವಣಗೆರೆ: ‘ಲಿಂಗಾಯತ ವೀರಶೈವ ಧರ್ಮ ಒಡೆಯಬಾರದು. ಡಿ.ಕೆ. ಶಿವಕುಮಾರ್ ಹೇಳಿರುವುದು ಸರಿ ಇದೆ. ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಸುಮ್ಮನಿರದಿದ್ದರೆ ನಾವೇ ಹೈಕಮಾಂಡ್‌ಗೆ ದೂರು ನೀಡುತ್ತೇವೆ’ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.

‘ಪಾಟೀಲ ಕಡೆ ದುಡ್ಡು ಇದೆ ಎಂದು ಅಹಂನಿಂದ ವರ್ತಿಸುವುದು ಸರಿಯಲ್ಲ. ಸಮಾಜ ಒಡೆಯುವ ಕೆಲಸವನ್ನು ಪಾಟೀಲ ಮತ್ತು ವಿನಯ ಕುಲಕರ್ಣಿ ಬಿಡಬೇಕು’ ಎಂದು ಪತ್ರಿಕಾಗೋಷ್ಠಿ‌ಯಲ್ಲಿ ತಿಳಿಸಿದರು.

‘ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಪಾಟೀಲ ಮತ್ತು ವಿನಯ ಕುಲಕರ್ಣಿ ಮಾತು ಕೇಳಿ ಲಿಂಗಾಯತಕ್ಕೆ ಸ್ವತಂತ್ರ್ಯ ಧರ್ಮದ ಮಾನ್ಯತೆ ನೀಡಬೇಕು ಎಂದು ಸಿದ್ದರಾಮಯ್ಯ ಕೇಂದ್ರಕ್ಕೆ ಶಿಪಾರಸು ಮಾಡಿದ್ದರು. ಶಿವಕುಮಾರ್ ವಿರುದ್ದ ಪಾಟೀಲ ಮತ್ತು ವಿನಯ ಕುಲಕರ್ಣಿ ಹೇಳಿಕೆ ನೀಡುತ್ತಿದ್ದಾರೆ‌. ಇವರೇನು ಕಾಂಗ್ರೆಸ್ ಹೈಕಮಾಂಡ್ ಅಲ್ಲ’ ಎಂದರು.

**

ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಶಿವಕುಮಾರ್‌ ಜೊತೆ ನಾನು ಚರ್ಚಿಸಿಲ್ಲ. ಪಕ್ಷಕ್ಕೂ ಧರ್ಮದ ವಿಚಾರಕ್ಕೂ ಸಂಬಂಧ ಇಲ್ಲ.

-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

**

ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಶಿವಕುಮಾರ್ ಹಸ್ತಕ್ಷೇಪ ಬೇಕಿಲ್ಲ. ಅವರು ವ್ಯಕ್ತಪಡಿಸಿರುವುದು ಪಕ್ಷದ ನಿಲುವಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ.

-ಎಂ.ಬಿ.ಪಾಟೀಲ, ಕಾಂಗ್ರೆಸ್‌ ಶಾಸಕ

**

ಸಚಿವ ಡಿ.ಕೆ.ಶಿವಕುಮಾರ್‌ ಪಕ್ಷದ ತಪ್ಪನ್ನು ಒಪ್ಪಿಕೊಂಡಿರುವುದು ಸ್ವಾಗತಾರ್ಹ. ವೀರಶೈವ ಹಾಗೂ ಲಿಂಗಾಯತರ ನಡುವೆ ಭೇದ ಮೂಡಿಸಲು ಪ್ರಯತ್ನಿಸುವರಿಗೆಗೆ ಜನರೇ ಪಾಠ ಕಲಿಸುತ್ತಾರೆ.

-ಡಾ.ಅನ್ನದಾನೀಶ್ವರ ಸ್ವಾಮೀಜಿ, ಅನ್ನದಾನೀಶ್ವರ ಮಠ, ಮುಂಡರಗಿ

**

ಲಿಂಗಾಯತ ಸ್ವತಂತ್ರ ಧರ್ಮದ ಸ್ಥಾನಕ್ಕೆ ಬೀದಿ ರಂಪಾಟ ಮಾಡಿದ್ದು ಸಾಕು. ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗುವ ಅಗತ್ಯವಿದೆ.

-ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.