ADVERTISEMENT

ಮದ್ಯ ಖರೀದಿಗೂ ಆಧಾರ್ ಕಡ್ಡಾಯ ?

* ಟೆಟ್ರಾ ಪ್ಯಾಕ್‌, ಬಾಟಲಿಗಳಿಂದ ಪರಿಸರ ಮಾಲಿನ್ಯ * ಅಬಕಾರಿ ಇಲಾಖೆಗೆ ರಾಜ್ಯ ಸರ್ಕಾರದಿಂದ ಪತ್ರ

ಸಂತೋಷ ಜಿಗಳಿಕೊಪ್ಪ
Published 30 ಆಗಸ್ಟ್ 2019, 20:01 IST
Last Updated 30 ಆಗಸ್ಟ್ 2019, 20:01 IST
   

ಬೆಂಗಳೂರು: ಹಲವು ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್‌ ಅನ್ನು ಮದ್ಯ ಖರೀದಿಗೂ ಕಡ್ಡಾಯ ಮಾಡಬಹುದೇ...? ಹೀಗೊಂದು ಚಿಂತನೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ. ಆಧಾರ್ ಕಡ್ಡಾಯದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಅಬಕಾರಿ ಇಲಾಖೆ ಆಯುಕ್ತರಿಗೆ, ಇಲಾಖೆಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಮದ್ಯದ ಟೆಟ್ರಾ ಪ್ಯಾಕ್ ಹಾಗೂ ಬಾಟಲಿಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಅದರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡುವಂತೆಯೂ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ನಿರ್ಜನ ಪ್ರದೇಶ, ಮೈದಾನ, ಉದ್ಯಾನ, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಮದ್ಯದ ಬಾಟಲಿ ಹಾಗೂ ಟೆಟ್ರಾ ಪ್ಯಾಕ್‌ಗಳನ್ನು ಬಿಸಾಡಲಾಗುತ್ತಿದೆ. ಕೆರೆ, ನದಿ ದಡದಲ್ಲೂ ಬಾಟಲಿ ಹಾಗೂ ಟೆಟ್ರಾ ಪ್ಯಾಕ್‌ಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಇವು ಪರಿಸರಕ್ಕೆ ಮಾರಕವಾಗಿದ್ದು, ನೀರು ಕುಡಿಯಲು ಬರುವ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿವೆ.

ADVERTISEMENT

ಆ ಬಗ್ಗೆ ಸಮೀಕ್ಷೆ ನಡೆಸಿದ್ದ ಮಂಗಳೂರಿನ ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ’, ಮದ್ಯದ ಟೆಟ್ರಾ ಪ್ಯಾಕ್ ಹಾಗೂ ಬಾಟಲಿಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮದ್ಯ ಖರೀದಿ ಮಾಡಬೇಕಾದರೆ ಆಧಾರ್ ಕಡ್ಡಾಯ ಮಾಡಬೇಕೆಂಬುದು ಸೇರಿದಂತೆ ಏಳು ಪ್ರಮುಖ ಸಲಹೆಗಳನ್ನೂ ನೀಡಿದೆ.

ಆ ಮನವಿ ಉಲ್ಲೇಖಿಸಿ ಅಬಕಾರಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಕಾರ್ಯದರ್ಶಿಯು, ಒಕ್ಕೂಟದ ಸಲಹೆಗಳ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಹೇಳಿದ್ದಾರೆ. ಅದರನ್ವಯ ಆಯುಕ್ತರು, ರಾಜ್ಯದ ಎಲ್ಲ ಉಪ ಆಯುಕ್ತರಿಗೆ ಸಂದೇಶ ಕಳುಹಿಸಿ ಹಿಂಬರಹ ನೀಡುವಂತೆ ಸೂಚಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಅಬಕಾರಿ ಇಲಾಖೆಯ ನಿರೀಕ್ಷಕರು ಈಗಾಗಲೇ ಹಿಂಬರಹ ಕೊಟ್ಟಿದ್ದು, ಅದರಲ್ಲಿರುವ ಸಲಹೆಗಳ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ‘ಕೆಲ ಸಲಹೆಗಳು ಹಾಸ್ಯಾಸ್ಪದ’ ಎಂದು ಹಲವರು ಹೇಳುತ್ತಿದ್ದಾರೆ.

‘ಒಕ್ಕೂಟ ನೀಡಿರುವ ಸಲಹೆಗಳ ಬಗ್ಗೆ ನಾವು ಆಯುಕ್ತರಿಗೆ ಅಭಿಪ್ರಾಯ ತಿಳಿಸಲಿದ್ದೇವೆ. ಅವುಗಳ ಜಾರಿ ಬಗ್ಗೆ ಸರ್ಕಾರವೇ ಕ್ರಮ ಕೈಗೊಳ್ಳಬೇಕು’ ಎಂದು ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಒಕ್ಕೂಟ ನೀಡಿರುವ ಸಲಹೆಗಳು

* ಮದ್ಯದ ಅಂಗಡಿಯವರು ವ್ಯಕ್ತಿಯ ಆಧಾರ್ ಪಡೆದು ಕಂಪ್ಯೂಟರ್‌ನಲ್ಲಿ ಮಾಹಿತಿ ದಾಖಲಿಸಿಕೊಂಡು ಮದ್ಯ ನೀಡಬೇಕು.

* ಒಮ್ಮೆ ಮದ್ಯ ಖರೀದಿಸಿಕೊಂಡು ಹೋದ ವ್ಯಕ್ತಿ, ಪುನಃ ಮದ್ಯ ಖರೀದಿಸಲು ಅಂಗಡಿಗೆ ಬಂದಾಗ ಹಳೆಯ ಖಾಲಿ ಬಾಟಲಿ ಪಡೆದು ಮದ್ಯ ನೀಡಬೇಕು.

*ಎಲ್ಲೆಂದರಲ್ಲಿ ಖಾಲಿ ಮದ್ಯದ ಬಾಟಲಿ ಬಿದ್ದಿದ್ದರೆ, ಅವುಗಳ ಬಾರ್ ಕೋಡ್ ಸ್ಕ್ಯಾನ್ ಮಾಡಿ ಬಾಟಲಿ ಮಾರಿದ ಅಂಗಡಿಗೆ ದಂಡ ವಿಧಿಸಬೇಕು. ಪರವಾನಗಿಯನ್ನೂ ರದ್ದುಪಡಿಸಬೇಕು

*ಕುಡುಕರ ಹಾಗೂ ಅವರ ಪತ್ನಿ, ಮಕ್ಕಳ ಕ್ಷೇಮಾಭಿವೃದ್ಧಿಗೆ ಹಣ ಮೀಸಲಿಡಬೇಕು

*ಮದ್ಯ ಕುಡಿದು ಸಾರ್ವಜನಿಕ ಸ್ಥಳದಲ್ಲಿ ಬೀಳುವವರನ್ನು ಅಬಕಾರಿ ಇಲಾಖೆಯ ವಾಹನದಲ್ಲಿ ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಮನೆಗೆ ಕರೆದೊಯ್ಯಬೇಕು

*ದುಡಿದ ಎಲ್ಲ ಹಣವನ್ನು ಮದ್ಯ ಕುಡಿಯಲು ಖರ್ಚು ಮಾಡಿದರೆ, ಕುಡುಕರ ಮನೆಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಇಲಾಖೆಯೇ ಉಚಿತವಾಗಿ ನೀಡಬೇಕು

*ಕುಡಿತದಿಂದ ಆರೋಗ್ಯ ಹಾಳಾದರೆ, ಕುಡುಕರ ಹಾಗೂ ಅವರ ಕುಟುಂಬದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇಲಾಖೆ ಅಥವಾ ಸರ್ಕಾರ ಭರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.