ADVERTISEMENT

ಸ್ಥಳೀಯ ಸಂಸ್ಥೆ: ಮೈತ್ರಿ ನಿರ್ಧಾರವಾಗಿಲ್ಲ- ನಿಖಿಲ್‌ ಕುಮಾರಸ್ವಾಮಿ

ವರಿಷ್ಠರ ಮಾತಿಗಷ್ಟೇ ಬೆಲೆ : ನಿಖಿಲ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 0:15 IST
Last Updated 10 ಜನವರಿ 2026, 0:15 IST
<div class="paragraphs"><p>ನಿಖಿಲ್‌ ಕುಮಾರಸ್ವಾಮಿ</p></div>

ನಿಖಿಲ್‌ ಕುಮಾರಸ್ವಾಮಿ

   

ಬೆಂಗಳೂರು: ‘ಪಕ್ಷದ ಕಾರ್ಯಕರ್ತರಿಗೆ ಪ್ರಾತಿನಿಧ್ಯ ಒದಗಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಸಾಧ್ಯವಾಗುವುದರಿಂದ ಈ ಚುನಾವಣೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಆದರೆ, ಬಿಜೆಪಿ ಜತೆಗೆ ಮೈತ್ರಿ ಇನ್ನೂ ನಿರ್ಧಾರವಾಗಿಲ್ಲ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಪ್ರೆಸ್‌ ಕ್ಲಬ್‌ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ನಾಯಕರ ಪ್ರಾತಿನಿಧ್ಯಕ್ಕೆ ಅವಕಾಶವಿದೆ. ಆ ಚುನಾವಣೆಗಳಲ್ಲಿ ಕಾರ್ಯಕರ್ತರು ಬೆವರು ಹರಿಸಿರುತ್ತಾರೆ. ಆ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಸಿಗುವುದು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಕಾರ್ಯಕರ್ತರ ಚುನಾವಣಾ ರಾಜಕೀಯ ಜೀವನ ಆರಂಭವಾಗುವುದು ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರೆ ತಮಗೆಲ್ಲಿ ಸ್ಥಾನ ಸಿಗುವುದಿಲ್ಲವೋ ಎಂದು ಕೆಲವು ಆತಂಕ ವ್ಯಕ್ತಪಡಿಸಿರಬಹುದು. ಅದು ಪಕ್ಷದ ತೀರ್ಮಾನವಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ನಿರ್ಧಾರವಾಗಿರುವುದು ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯೆ. ಸ್ಥಳೀಯ ಸಂಸ್ಥೆ ಚುನಾವಣೆಗಳ ಮೈತ್ರಿ ನಿರ್ಧಾರವನ್ನೂ ಅವರೇ ತೆಗೆದುಕೊಳ್ಳುತ್ತಾರೆ. ಬೇರೆ ಯಾರೊಬ್ಬರ ಮಾತಿಗೂ ಬೆಲೆಯಿಲ್ಲ’ ಎಂದರು.

ಡಿ.ಕೆ.ಶಿವಕುಮಾರ್‌ ಅವರ ಉಪ ಮುಖ್ಯಮಂತ್ರಿ ಹುದ್ದೆಯೇ ಅಸಂವಿಧಾನಿಕ. ಕಾಂಗ್ರೆಸ್‌ ಹೆಸರಿನಿಂದ ರಾಷ್ಟ್ರೀಯ ಪಕ್ಷ ಎಂಬುದನ್ನು ತೆಗೆಯಲಿ. ನಮ್ಮ ಮೈತ್ರಿಯ ಬಗ್ಗೆ ಅವರು ಯೋಚಿಸುವುದು ಬೇಡ
-ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

‘ಚುನಾವಣೆಗೆ ಸಿದ್ಧತೆ’

‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಎರಡೂವರೆ ವರ್ಷದ ನಂತರ ಬರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿದ್ದೇವೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಮುಂದಿನ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ‘ನಾನು ರಾಜಕೀಯ ಮಾಡಲು ಮತ್ತು ವಿಧಾನಸೌಧದ ಮೆಟ್ಟಿಲು ಹತ್ತಲೆಂದೇ ಬಂದವನು. ಜನರೊಂದಿಗೆ ಜನತಾದಳ ಪ್ರವಾಸದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆಬ್ರುವರಿ 1ರಿಂದ ಮತ್ತೆ 2ನೇ ಹಂತದಲ್ಲಿ ಪ್ರವಾಸ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.