ADVERTISEMENT

ಲಾಕ್‌ಡೌನ್‌ ಮಧ್ಯೆಯೂ ನರೇಗಾ ಯೋಜನೆಯಡಿ ಕಾರ್ಮಿಕರ ಕೆಲಸ: ಸಚಿವ ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 11:02 IST
Last Updated 24 ಏಪ್ರಿಲ್ 2020, 11:02 IST
   

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಮಧ್ಯೆಯೂ ಏಪ್ರಿಲ್‌ನಲ್ಲಿ ರಾಜ್ಯದಲ್ಲಿ 1.76 ಲಕ್ಷ ಕೂಲಿ ಕಾರ್ಮಿಕರು ನರೇಗಾ ಮತ್ತಿತರ ಯೋಜನೆಯಡಿ ಕೆಲಸ ಮಾಡಿದ್ದು, 15 ದಿನಗಳಲ್ಲಿ ಕೂಲಿ ಹಣ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇನ್ನೂ ಹೆಚ್ಚಿನ ಕೂಲಿ ಕಾರ್ಮಿಕರ ಅವಶ್ಯಕತೆ ಇದೆ. ಬಂದವರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಕೂಲಿಗಾಗಿ ₹1039 ಕೋಟಿ ಮತ್ತು ಸಾಮಗ್ರಿಗಳಿಗಾಗಿ ₹821 ಕೋಟಿ ಸೇರಿ ಒಟ್ಟು ₹1861 ಕೋಟಿ ಅನುದಾನ ಮಂಜೂರು ಮಾಡಿದೆ. 2019–20 ರ ಸಾಲಿನಲ್ಲಿ ಬಾಕಿ ಇರುವ ಕೂಲಿ₹346 ಕೋಟಿಯನ್ನು ಕಾರ್ಮಿಕರ ಖಾತೆಗೆ ನೇರವಾಗಿ ಪಾವತಿ ಮಾಡಲಾಗಿದೆ ಎಂದೂ ಅವರು ಹೇಳಿದರು.

ADVERTISEMENT

ರಾಜ್ಯದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 5612 ಕಿ.ಮೀ ರಸ್ತೆಗಳನ್ನು ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ 3226 ಕಿ.ಮೀ ರಸ್ತೆಗೆ ಟೆಂಡರ್‌ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₹1274 ಕೋಟಿ ನೀಡಲಿದ್ದು, ರಾಜ್ಯದ ಪಾಲು ₹1455 ಕೋಟಿ ಸೇರಿಸಿ ₹2729 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಅನುಮೋದನೆ ಸಿಕ್ಕಿದ್ದು, ಯೋಜನೆ ಜಾರಿಗೆ ₹1100 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ 49 ಬರಪೀಡಿತ ತಾಲ್ಲೂಕುಗಳಿಗೆ ತಲಾ ₹ 1 ಕೋಟಿ ಮತ್ತು ಬರ ಇಲ್ಲದ 127 ತಾಲ್ಲೂಕುಗಳಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಲು ತಲಾ₹50 ಲಕ್ಷ ಬಿಡಗಡೆ ಮಾಡಲಾಗಿದೆ ಎಂದರು.

ಇದಲ್ಲದೇ ಬರಪೀಡಿತವಲ್ಲದ ತಾಲ್ಲೂಕುಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಬದಗಿಸಲು ₹50 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ₹29.50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಮನೆ ಮನೆ ಗಂಗೆ ಯೋಜನೆ

ಮನೆ ಮನೆಗೆ ಗಂಗೆ ಯೋಜನೆಯಡಿ 15,88,195 ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. ಒಟ್ಟು 80,72,422 ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸುವ ಉದ್ದೇಶವಿದೆ. ಉಳಿದ 64,84,227 ಮನೆಗಳಿಗೆ 2024 ರೊಳಗೆ ನಲ್ಲಿ ಸಂಪರ್ಕಕಲ್ಪಿಸಲಾಗುತ್ತದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನ ಗೂಲಿ ₹ 275 ರೂಗೆ ಹೆಚ್ಚಳ ಮಾಡಲಾಗಿದೆ ಎಂದು ಈಶ್ವರಪ್ಪ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.