ADVERTISEMENT

ಕರ್ಫ್ಯೂ ಇರುವುದರಿಂದ ಮೇ 31ರಂದು ಅಧಿಕಾರ ಸ್ವೀಕಾರ ಇಲ್ಲ: ಡಿ.ಕೆ.ಶಿವಕುಮಾರ

ಬೇರೊಂದು ದಿನ ವಿಶಿಷ್ಟವಾಗಿ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 19 ಮೇ 2020, 10:18 IST
Last Updated 19 ಮೇ 2020, 10:18 IST
ಡಿ.ಕೆ.ಶಿವಕುಮಾರ
ಡಿ.ಕೆ.ಶಿವಕುಮಾರ   

ಬೆಂಗಳೂರು: ‘ಪಕ್ಷದ ಅಧ್ಯಕ್ಷನಾಗಿ ಮೇ 31ರಂದು ಅಧಿಕಾರ ಸ್ವೀಕರಿಸಲು ನಿರ್ಧರಿಸಿದ್ದೆ. ಅಂದು ಭಾನುವಾರವಾಗಿದ್ದು, ಸಂಚಾರ ದಟ್ಟಣೆ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಆ ದಿನವನ್ನು ನಿಗದಿ‍ಪಡಿಸಿದ್ದೆ. ಆದರೆ, ಎಲ್ಲ ಭಾನುವಾರಗಳಂದು ಕರ್ಫ್ಯೂ ಎಂದು ಮುಖ್ಯಮಂತ್ರಿ ಘೋಷಿಸಿರುವುದರಿಂದ ಬೇರೊಂದು ದಿನ ಸಾಂಕೇತಿಕವಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ’ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಸಾಂಕೇತಿಕವಾಗಿ ಕಾರ್ಯಕ್ರಮ ನಡೆದರೂ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟ ಹೀಗೆ ರಾಜ್ಯದ ಉದ್ದಗಲಕ್ಕೂ ಜ್ಯೋತಿ ಹಚ್ಚುವ ಮೂಲಕ ವಿನೂತನವಾಗಿ ಹಮ್ಮಿಕೊಳ್ಳತ್ತೇವೆ’ ಎಂದೂ ಹೇಳಿದರು.

‘ಸಂವಿಧಾನ ಪೀಠಿಕೆ ಓದುವುದು, ಪ್ರತಿಜ್ಞೆ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸುತ್ತೇನೆ. ಪದಗ್ರಹಣ ಕಾರ್ಯಕ್ರಮದ ದಿನವನ್ನು ಮುಂದೆ ತಿಳಿಸುತ್ತೇನೆ’ ಎಂದೂ ಹೇಳಿದರು.

ADVERTISEMENT

‘ನನ್ನನ್ನು ಮಾರ್ಚ್ 11ರಂದು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷ ನೇಮಿಸಿದೆ. ಅಂದಿನಿಂದಲೇ ನಾನು ನನ್ನ ಕೆಲಸ ಆರಂಭಿಸಿದ್ದೇನೆ. ಅಧಿಕಾರ ಹಸ್ತಾಂತರ ವೇಳೆ ಸಾಂಕೇತಿಕವಾಗಿ ಧ್ವಜ ಬದಲಾಯಿಸುವ ಪದ್ಧತಿ ಇದೆ. ಪಕ್ಷದ ಎಲ್ಲ ಮುಖಂಡರನ್ನು ಸೇರಿಸಿ ದೊಡ್ಡಮಟ್ಟದಲ್ಲಿ ಪದಗ್ರಹಣ ಕಾರ್ಯಕ್ರಮ ಮಾಡಬೇಕೆಂಬ ಆಸೆ ಇತ್ತು. ಆದರೆ, ಕೊರೊನಾ ಕಾರಣಕ್ಕೆ ನನಗೆ ಆ ಭಾಗ್ಯ ಸಿಗಲಿಲ್ಲ. ಆದರೂ ಧ್ವಜ ಸ್ವೀಕಾರ ಕಾರ್ಯಕ್ರಮ ಮಾಡಬೇಕಿದೆ. ಅಧಿಕಾರ ಸ್ವೀಕರಿಸಲಿಲ್ಲವೆಂದು ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ’ ಎಂದರು.

ಕೇಂದ್ರ–ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ

‘ಕೇಂದ್ರ– ರಾಜ್ಯ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಯಾವುದೇ ಜನಪರ ಕಾರ್ಯಕ್ರಮ ಮಾಡಿಲ್ಲ. ಕೇಂದ್ರ ಘೋಷಿಸಿದ ಪ್ಯಾಕೇಜ್ ಎಲ್ಲಿಗೂ ತಲುಪಿಲ್ಲ. ಬ್ಯಾಂಕುಗಳಿಂದ ಸಾಲ ನೀಡಿ, ಬಡ್ಡಿ ಕಟ್ಟುವಂತೆ ಮಾಡಲಾಗಿದೆ. ಎಲ್ಲರನ್ನೂ ಮೋದಿ ಸರ್ಕಾರ ಸಾಲಗಾರರನ್ನಾಗಿ ಮಾಡುತ್ತಿದೆ’ ಎಂದು ಶಿವಕುಮಾರ್‌ ದೂರಿದರು.

‘ಸಹಾಯಧನವನ್ನು ಅನುದಾನದ ಮೂಲಕ ಕೇಂದ್ರ ಕೊಟ್ಟಿದ್ದರೆ ಒಪ್ಪುತ್ತಿದ್ದೆ. ಮುಖ್ಯಮಂತ್ರಿ ₹ 1,600 ಕೋಟಿ ಘೋಷಣೆ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಒಂದು ರೂಪಾಯಿ ಯಾರಿಗೂ ಸಿಕ್ಕಿಲ್ಲ. ಪೀಣ್ಯದಲ್ಲಿ ನಾಲ್ಕೂವರೆ ಲಕ್ಷ ಉದ್ಯಮಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಅಲ್ಲಿ ಮೂರೂವರೆ ಸಾವಿರ ಮಾತ್ರ ಕಿಟ್ ಹಂಚಿದ್ದಾರೆ. ಇದರಿಂದಲೇ ಸರ್ಕಾರದ ಜನಪರ ಕಾಳಜಿ ಗೊತ್ತಾಗುತ್ತದೆ’ ಎಂದರು.

‘ಕೇಂದ್ರದ ವಿರುದ್ಧವಾಗಿ ರಾಜ್ಯ ಸರ್ಕಾರ ಮಾರ್ಗಸೂಚಿ ಮಾಡಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಿಂದ ಅಪಾಯ ಹೆಚ್ಚಾಗುತ್ತಿದೆ. ಬೆಳಿಗ್ಗೆ ಮಂತ್ರಿ ಒಂದು ರೀತಿ, ಬಳಿಕ ಅಧಿಕಾರಿ ಇನ್ನೊಂದು ರೀತಿ ಹೇಳುತ್ತಾರೆ. ತಮ್ಮ ಜವಾಬ್ದಾರಿ ನಿಭಾಯಿಸಲು ಅವರಿಂದ ಆಗುತ್ತಿಲ್ಲ. ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದರು.

‘ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ಸರ್ಕಾರ ಸ್ವಂತಕ್ಕೆ ತೀರ್ಮಾನ ತೆಗೆದುಕೊಂಡಿದೆ. ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಯಾವುದೇ ಸಲಹೆ ಪಡೆದಿಲ್ಲ. ತಜ್ಞರ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಮುನ್ನೆಚ್ಚರಿಕೆ ಇಲ್ಲದೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ, ರಾಜ್ಯ ಎರಡೂ ಸರ್ಕಾರಗಳು ಇದನ್ನೇ ಮಾಡುತ್ತಿವೆ’ ಎಂದೂ ಶಿವಕುಮಾರ್ ದೂರಿದರು.

‘ಸರ್ಕಾರ ನೆರವು ನೀಡುತ್ತಿದ್ದರೆ ದೇಶ ಕಟ್ಟುವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುತ್ತಿರಲಿಲ್ಲ. ಇವತ್ತು ಅವರು ಊರಿಗೆ ವಾಪಸು ಹೋಗುವಂತೆ ಸರ್ಕಾರ ಮಾಡಿದೆ. ದೇಶಕ್ಕೆ ದುಡಿದವರಿಗೆ ಅಪಮಾನಿಸಿದೆ. ಲಾಕ್‌ಡೌನ್ ಸಡಿಲಿಕೆ ನಂತರ ನಾನು ರಾಜ್ಯ ಪ್ರವಾಸ ಮಾಡ್ತೇನೆ. ನೊಂದವರಿಗೆ ಸಾಂತ್ವನ ಹೇಳಿ, ಧ್ವನಿಯಾಗುತ್ತೇನೆ. ಎಲ್ಲ ವರ್ಗ, ಧರ್ಮದ ಜನರನ್ನು ಭೇಟಿ ಮಾಡ್ತೇನೆ. ಯಾವ ವರ್ಗಕ್ಕೆ ನೋವಾಗಿದೆಯೊ ಅವರಿಗೆ ಶಕ್ತಿ ತುಂಬುತ್ತೇನೆ’ ಎಂದರು.

‘ಸರ್ಕಾರ ಯಾವ ರೈತರಿಗೆ ಏನು ಸಹಾಯ ಮಾಡಿದೆ. ಹೂ ಬೆಳೆಗಾರರಿಗೆ ಸರ್ಕಾರ ಘೋಷಿಸಿರುವ ಪ್ರೋತ್ಸಾಹ ಧನ ಸಾಕಾಗುತ್ತದೆಯೆ? ಹೂ ಬೆಳೆ ಬೆಳೆಯಲು ಎರಡು, ಮೂರು ಲಕ್ಷ ಹಣ ಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ₹ 26 ಸಾವಿರ ಕೋಟಿ ಇದೆ. ನಾವು ಇಟ್ಟ ಪ್ಯಾಕೇಜ್ ಹಣವದು. ಅದನ್ನು ಬಳಸಿಕೊಂಡು ಆ ಜನರನ್ನು ಕಾಪಾಡಬಹುದು. ನಮ್ಮಲ್ಲಿ ಅಧಿಕಾರ ಇರುತ್ತಿದ್ದರೆ ಮನೆಮನೆಗೆ ತೆರಳಿ ಚೆಕ್ ಕೊಡುತ್ತಿದ್ದೆ’ ಎಂದೂ ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮುಖಂಡರಾದ ವಿ.ಎಸ್. ಉಗ್ರಪ್ಪ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.