ADVERTISEMENT

ಕೆಂಪು ವಲಯ ಬಿಟ್ಟು ಉಳಿದೆಡೆ ನಾಳೆಯಿಂದ ಚಟುವಟಿಕೆ ಆರಂಭ

ಬಸ್‌, ಆಟೋ, ಕ್ಯಾಬ್‌ ಸಂಚಾರಕ್ಕೆ ಅನುಮತಿ * ಕ್ರೀಡಾಂಗಣ ತೆರೆಯ ಬಹುದು* ಷರತ್ತು ಬದ್ಧ ವಿವಾಹಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಮೇ 2020, 8:54 IST
Last Updated 18 ಮೇ 2020, 8:54 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ನಾಳೆಯಿಂದ ಕೆಂಪು ವಲಯ ಮತ್ತು ಕಂಟೇನ್ಮೆಂಟ್‌ ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಖಾಸಗಿ ಬಸ್ಸುಗಳು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ಸಂಚಾರ ಆರಂಭಕ್ಕೆ ಮತ್ತು ಸಂಪೂರ್ಣ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಅಲ್ಲದೆ, ಮಾಲ್‌, ಸಿನಿಮಾ ಮತ್ತು ಬಿಟ್ಟು ಎಲ್ಲ ರೀತಿಯ ಅಂಗಡಿಗಳು, ಹೇರ್‌ ಕಟ್ಟಿಂಗ್‌ ಸಲೂನ್‌, ಕ್ರೀಡಾಂಗಣಗಳನ್ನು ತೆರೆಯಲು ಮತ್ತು ರಾಜ್ಯದೊಳಗೇ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಪ್ರತಿ ಭಾನುವಾರ ರಾಜ್ಯವಿಡೀ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ.

ಲಾಕ್‌ಡೌನ್‌ ಸಡಿಲಿಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸೋಮವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇಂದ್ರ ಸರ್ಕಾರ ಮೇ 31 ರ ಬಳಿಕ ಲಾಕ್‌ಡೌನ್‌ ವಿಸ್ತರಿಸಿ, ಮಾರ್ಗಸೂಚಿ ಹೊರಡಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಸಭೆ ನಡೆಸಲಾಯಿತು.

ADVERTISEMENT

ಬಸ್ಸುಗಳಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬಸ್‌ಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು. ನಾಳೆಯಿಂದ ಮೊದಲ ಹಂತವಾಗಿ 200 ಬಸ್‌ಗಳನ್ನು ರಸ್ತೆಗೆ ಬಿಡುತ್ತೇವೆ. ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಈಗಾಗಲೇ ನಿರ್ಧರಿಸಿರುವಂತೆ ಮೇ 31 ರವರೆಗೆ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ಇಲ್ಲ. ಆಟೋ ರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು. ಆಟೋಗಳಲ್ಲಿ ಚಾಲಕ ಸೇರಿ ಇಬ್ಬರು,‌ ಟ್ಯಾಕ್ಸಿ ಮತ್ತು ಕ್ಯಾಬ್‌ಗಳಲ್ಲಿ ಚಾಲಕ ಸೇರಿ ಮೂವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದರು.

ಲಾಕ್‌ಡೌನ್‌ ಮೇ 31 ರವರೆಗೆ ಮುಂದುವರೆಯುತ್ತದೆ. ಕಂಟೇನ್ಮೆಂಟ್‌ ವಲಯಗಳಲ್ಲಿ ಬಿಗಿ ಭದ್ರತೆ ಇರುತ್ತದೆ. ಕಾನೂನು ಬಾಹಿರವಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.

ಹೊರ ರಾಜ್ಯಗಳಿಂದ ಬರಲು ಇಚ್ಛೆಪಟ್ಟವರಿಗೆ ಹಂತ ಹಂತವಾಗಿ ಬಸ್‌ ವ್ಯವಸ್ಥೆ ಮಾಡಲಾಗುವುದು. ಅನಿವಾರ್ಯ ಇರುವವರಿಗೆ ಮಾತ್ರ ಅವಕಾಶ ನೀಡಲಾಗುವುದು. ಆ ರೀತಿಬಂದವರನ್ನು ತಪಾಸಣೆ ಮಾಡಿ ಸಾಮೂಹಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಕಡ್ಡಾಯವಾಗಿರುತ್ತದೆ ಎಂದರು.

ಎಲ್ಲ ಅಂಗಡಿಗಳಿಗೂ ಅವಕಾಶ

ನಾಳೆಯಿಂದ ಮಾಲ್‌, ಸಿನಿಮಾ ಮತ್ತು ಬಿಟ್ಟು ಎಲ್ಲ ರೀತಿಯ ಅಂಗಡಿಗಳು, ಹೇರ್‌ ಕಟ್ಟಿಂಗ್‌ ಸಲೂನ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಅಲ್ಲದೆ, ರಾಜ್ಯದ ಒಳಗೆ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು. ಹೊರ ರಾಜ್ಯಗಳಿಗೆ ರೈಲಿನ ಓಡಾಟಕ್ಕೆ ಅವಕಾಶವಿಲ್ಲ ಎಂದೂ ಅವರು ಹೇಳಿದರು.‌

ಇನ್ನು ಮುಂದೆ ಪ್ರತಿ ಭಾನುವಾರ ರಾಜ್ಯದ ಎಲ್ಲ ಕಡೆಗಳಲ್ಲೂ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ. ಯಾವುದೇ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ಆ ದಿನ ಎಲ್ಲರಿಗೂ ವಿಶ್ರಾಂತಿ ಎಂದು ಭಾವಿಸಬೇಕು ಎಂದೂ ಅವರು ತಿಳಿಸಿದರು. ಉದ್ಯಾನಗಳಲ್ಲಿ ವಿಹಾರಕ್ಕೂ ಅವಕಾಶ ನೀಡಲಾಗಿದೆ. ಬೆಳಿಗ್ಗೆ 7 ರಿಂದ 9 ಗಂಟೆಯರವರೆಗೆ ಸಂಜೆ 5 ರಿಂದ 7 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಯಾವುದಕ್ಕೆಲ್ಲ ಅವಕಾಶಗಳು:

* ಎಲ್ಲ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ

* ಹೊಟೇಲ್‌ಗಳಲ್ಲಿ ಪಾರ್ಸೆಲ್‌

* ಬೀದಿ ಬದಿ ವ್ಯಾಪಾರ

*ಕ್ರೀಡೆಗೆ ಅವಕಾಶ, ಜೀಮ್‌ ತೆರೆಯುವಂತಿಲ್ಲ

* ಮದುವೆ ನಡೆಸಬಹುದು. ಅದರೆ ಷರತ್ತುಗಳನ್ನು ಪಾಲಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.