ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಮೇಲೆ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಶುಕ್ರವಾರ ದಾಳಿ ನಡೆಸಿದ್ದು, ಈ ತಾಣಗಳು ಅಕ್ರಮಗಳ ಕೊಂಪೆಯಾಗಿರುವುದು ಪತ್ತೆಯಾಗಿದೆ.
ಖಾಸಗಿ ವ್ಯಕ್ತಿಯ ಬಳಿ ನೂರಕ್ಕೂ ಹೆಚ್ಚು ನೋಂದಣಿ ಪ್ರಮಾಣ ಪತ್ರ (ಆರ್‌ಸಿ ಕಾರ್ಡ್) ಮತ್ತು ಚಾಲನಾ ಪರವಾನಗಿ (ಡಿಎಲ್) ಕಾರ್ಡ್ ಇರುವುದರ ಜತೆಗೆ ಹತ್ತು ಹಲವು ಅಕ್ರಮಗಳು ನಡೆಯುತ್ತಿರುವುದು ದಾಳಿ ವೇಳೆ ಬಹಿರಂಗಗೊಂಡಿದೆ.
ಆರ್‌ಸಿ ಕಾರ್ಡ್ ಮತ್ತು ಡಿಎಲ್ ವಿತರಣೆಗೆ ಲಂಚ ಕೇಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರು ದಾಳಿ ನಡೆಸಿದ್ದರು.
ಯಶವಂತಪುರ, ರಾಜಾಜಿನಗರ, ಜಯನಗರ, ಯಲಹಂಕ, ಕಸ್ತೂರಿನಗರ ಮತ್ತು ಕೆ.ಆರ್. ಪುರ ಆರ್‌ಟಿಒ ಕಚೇರಿಗಳ ಮೇಲೆ ಮಧ್ಯಾಹ್ನ 1ಕ್ಕೆ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.
ಎಲ್ಲ ಕಚೇರಿಗಳಲ್ಲೂ ವಿತರಣೆಗೆ ಬಾಕಿಯಿದ್ದ ಸಾವಿರಾರು ಆರ್‌ಸಿ ಕಾರ್ಡ್‌ಗಳು ಮತ್ತು ಡಿಎಲ್‌ಗಳು ಪತ್ತೆಯಾಗಿವೆ. ಈ ಕಾರ್ಡ್‌ಗಳನ್ನು ಏಕೆ ವಿತರಿಸಲಾಗಿಲ್ಲ ಎಂಬುದರ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ವಿವರಣೆ ಪಡೆದುಕೊಳ್ಳಿ, ಲೋಪವಾಗಿದ್ದರೆ ಅಪರಾಧ ಪ್ರಕರಣ ದಾಖಲಿಸಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ.
ಯಶವಂತಪುರ ಆರ್‌ಟಿಒ ಕಚೇರಿಯಲ್ಲಿ 789 ಡಿಎಲ್‌ಗಳನ್ನು ಸಂಬಂಧಿಸಿದವರಿಗೆ ವಿತರಣೆ ಮಾಡಿಲ್ಲ ಮತ್ತು 2,095 ಡಿಎಲ್‌ಗಳನ್ನು ಮುದ್ರಿಸಿಯೇ ಇಲ್ಲ. ವಿತರಣೆಯಾಗದ ಡಿಎಲ್‌ಗಳನ್ನು ವರ್ಗೀಕರಿಸಿ, ಬೇರೆ–ಬೇರೆ ಕವರ್‌ಗಳಲ್ಲಿ ಇರಿಸಲಾಗಿದೆ. ಯಾವ ಕಾರಣಕ್ಕಾಗಿ ಇವುಗಳನ್ನು ಹೀಗೆ ಇರಿಸಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿರುವುದಿಲ್ಲ. ಎಲ್ಲ ಕಚೇರಿಗಳಲ್ಲೂ ಇದೇ ಸ್ಥಿತಿ ಇರುವುದು ದಾಳಿ ವೇಳೆ ಪತ್ತೆಯಾಗಿದೆ.
ಯುಪಿಐ ಆ್ಯಪ್ ಡಿಲೀಟ್: ಕೆ.ಆರ್. ಪುರದ ಕಚೇರಿ ಮೇಲೆ ದಾಳಿ ಆರಂಭವಾಗುತ್ತಿದ್ದಂತೆ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯು ತಮ್ಮ ಮೊಬೈಲ್‌ನಲ್ಲಿದ್ದ ಗೂಗಲ್‌ಪೇ, ಫೋನ್‌ಪೇ, ಪೇಟಿಎಂ ಆ್ಯಪ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಕೆಲವರ ಮೊಬೈಲ್ ಅನ್ನು ಪರಿಶೀಲಿಸಿದಾಗ, ಆ್ಯಪ್‌ಗಳು ಡಿಲೀಟ್ ಆಗುತ್ತಿದ್ದ ಸ್ಥಿತಿಯಲ್ಲಿದ್ದವು. ಆ ಎಲ್ಲ ಸಿಬ್ಬಂದಿಯ ಬ್ಯಾಂಕ್ ವಹಿವಾಟು, ಯುಪಿಐ ವಹಿವಾಟು, ಆಸ್ತಿ ವಿವರ, ಆಸ್ತಿ ಖರೀದಿ ವಿವರ, ವೇತನ ವಿವರಗಳನ್ನು ಒದಗಿಸುವಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದ್ದಾರೆ.
ಕೆ.ಆರ್. ಪುರ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 1.52 ಲಕ್ಷಕ್ಕೂ ಹೆಚ್ಚು ವಾಹನಗಳ ಫಿಟ್‌ನೆಸ್ ಅವಧಿ ಮುಗಿದಿದೆ. ಅಂತಹ ವಾಹನಗಳ ಮಾಲೀಕರಿಗೆ ನೋಟಿಸ್ ನೀಡದೆ ಮತ್ತು ವಾಹನಗಳನ್ನು ವಶಕ್ಕೆ ಪಡೆಯದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಫಿಟ್‌ನೆಸ್ ಅವಧಿ ಮುಗಿದ ವಾಹನಗಳಲ್ಲಿ ಶಾಲಾ ಬಸ್‌ಗಳೂ ಸೇರಿವೆ. ಆರ್‌ಟಿಒ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ವಾಹನಗಳನ್ನು ಅಕ್ರಮವಾಗಿ ಸಂಚರಿಸಲು ಬಿಟ್ಟಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಉಪ ಲೋಕಾಯುಕ್ತರು ಸೂಚಿಸಿದ್ದಾರೆ.
ದಾಳಿ ವೇಳೆ ಹಲವು ಅಕ್ರಮಗಳು ಪತ್ತೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ತನಿಖೆ ಮುಂದುವರೆದಂತೆ ಮತ್ತಷ್ಟು ಅಕ್ರಮಗಳು ಗೊತ್ತಾಗಬಹುದು ಎಂದು ಲೋಕಾಯಕ್ತ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮದ ನಾನಾರೂಪ
* ಆರೂ ಆರ್‌ಟಿಒ ಕಚೇರಿ ಸಿಬ್ಬಂದಿಯು ನಗದು ವಹಿಯನ್ನು ನಿರ್ವಹಣೆ ಮಾಡಿಲ್ಲ. ಬಹುತೇಕ ಸಿಬ್ಬಂದಿ ನಿಗದಿತ ಮಿತಿಗಿಂತ ಹೆಚ್ಚು ನಗದು ಹೊಂದಿದ್ದರು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ
* ಕೆ.ಆರ್.ಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಕಾರು ಚಾಲಕ ಮನು ದಾಳಿಗೆ ಮೊದಲೇ ಪರಾರಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ
* ಆರ್‌ಸಿ ಕಾರ್ಡ್ ಡಿಎಲ್ ಕಾರ್ಡ್‌ಗಳು ಮುದ್ರಣಕ್ಕೆ ಸಿದ್ದವಿದ್ದರೂ ಮುದ್ರಿಸಿಲ್ಲ. ರಾಜಾಜಿನಗರ ಕಚೇರಿ ಒಂದಲ್ಲೇ 3800 ಡಿಎಲ್ ಮತ್ತು 6300 ಆರ್‌ಸಿ ಕಾರ್ಡ್‌ಗಳು ಹೀಗೆ ಬಾಕಿ ಇವೆ. ಮುದ್ರಣವಾಗಿರುವ ಕಾರ್ಡ್‌ಗಳನ್ನು ಅನಗತ್ಯವಾಗಿ ಕಚೇರಿಯಲ್ಲೇ ಇರಿಸಿಕೊಳ್ಳಲಾಗಿದೆ
ಏಜೆಂಟ್ ಬಳಿ ಆರ್‌ಸಿ ಡಿಎಲ್
ಕಸ್ತೂರಿನಗರ ಆರ್‌ಟಿಒ ಕಚೇರಿ ಮೇಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಕಚೇರಿ ಆವರಣದಲ್ಲಿದ್ದ ಏಜೆಂಟರು ಪರಾರಿಯಾಗಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಗೆ ಇಬ್ಬರು ಏಜೆಂಟರು ಸಿಕ್ಕಿಬಿದ್ದಿದ್ದು ಒಬ್ಬರ ಬಳಿ 83 ಡಿಎಲ್ ಮತ್ತು 50 ಆರ್‌ಸಿ ಕಾರ್ಡ್ ಪತ್ತೆಯಾಗಿದೆ. ಏಜೆಂಟ್ ಬಳಿ ₹14000 ನಗದು ಪತ್ತೆಯಾಗಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಆರ್‌ಸಿ ಕಾರ್ಡ್ ಮತ್ತು ಡಿಎಲ್ ಮೇಲೆ ಪ್ಲಾಸ್ಟಿಕ್ ಕವರ್‌ಗಳಿದ್ದು ₹1500 ₹2000 ₹2500 ₹5000 ಎಂದು ಬರೆಯಲಾಗಿದೆ. ಆ ಹಣವನ್ನು ಪಡೆದುಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ರೈಟ್ ಗುರುತು ಮಾಡಲಾಗಿದೆ. ಕಚೇರಿಯ ಸುಪರ್ದಿಯಲ್ಲಿ ಇರಬೇಕಿದ್ದ ಕಾರ್ಡ್‌ಗಳು ಖಾಸಗಿ ವ್ಯಕ್ತಿಯ ಬಳಿ ಹೇಗೆ ಇದ್ದವು ಎಂಬುದರ ಬಗ್ಗೆ ಆರ್‌ಟಿಒ ಅಧಿಕಾರಿ ವಿವರಣೆ ನೀಡಿಲ್ಲ. ಈ ಬಗ್ಗೆ ಅಪರಾಧ ಪ್ರಕರಣ ದಾಖಲಿಸುವಂತೆ ಸ್ಥಳೀಯ ಪೊಲೀಸರಿಗೆ ಉಪ ಲೋಕಾಯುಕ್ತರು ಸೂಚಿಸಿದ್ದಾರೆ.
ದಾಳಿ ಮಾಹಿತಿ ಸೋರಿಕೆ ಶಂಕೆ?
ಆರೂ ಆರ್‌ಟಿಒ ಕಚೇರಿಗಳ ಆವರಣದಲ್ಲಿ 100ಕ್ಕೂ ಹೆಚ್ಚು ಸ್ಟೇಷನರಿ ಅಂಗಡಿಗಳಿದ್ದು ದಾಳಿ ವೇಳೆ ಎಲ್ಲಕ್ಕೂ ಬೀಗ ಹಾಕಲಾಗಿತ್ತು. ಆರ್‌ಟಿಒ ಕಚೇರಿಗೆ ಸಲ್ಲಿಸಲು ಅಗತ್ಯವಿರುವ ವಿವಿಧ ಅರ್ಜಿಗಳು ಝೆರಾಕ್ಸ್ ಈ ಅಂಗಡಿಗಳಲ್ಲಿ ಲಭ್ಯವಿದ್ದು ದಾಳಿಯ ವೇಳೆ ಅವುಗಳಿಗೆ ಏಕೆ ಬೀಗ ಹಾಕಲಾಗಿತ್ತು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ಈ ಅಂಗಡಿಗಳ ಮೂಲಕ ಎಜೆಂಟರು ಕಾರ್ಯನಿರ್ವಹಿಸುತ್ತಾರೆ. ಆರ್‌ಸಿ ಕಾರ್ಡ್‌ಗಳು ಮತ್ತು ಡಿಎಲ್‌ಗಳನ್ನು ಈ ಅಂಗಡಿಗಳಲ್ಲಿ ಇರಿಸಿಲಾಗಿರುತ್ತದೆ ಎಂದು ಹಲವು ದೂರುಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ಅಂಗಡಿಗಳನ್ನೂ ಗುರಿಯಾಗಿಸಿಕೊಂಡು ದಾಳಿ ಕಾರ್ಯಾಚರಣೆ ರೂಪಿಸಲಾಗಿತ್ತು. ಆದರೆ ದಾಳಿಯ ಮಾಹಿತಿ ಸೋರಿಕೆಯಾಗಿ ಆ ಎಲ್ಲ ಅಂಗಡಿಗಳನ್ನು ಮುಚ್ಚಿರುವ ಸಾಧ್ಯತೆ ಇದೆ ಎಂದು ಹೇಳಿವೆ. 2024ರ ಅವಧಿಯಲ್ಲಿ ಕಾರ್ಯಾಚರಣೆಯ ಮಾಹಿತಿ ಸೋರಿಕೆಯಾಗಿ ದಾಳಿ ವಿಫಲವಾಗಿತ್ತು. ಲೋಕಾಯುಕ್ತದ ಸಿಬ್ಬಂದಿಯಿಂದಲೇ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.