ADVERTISEMENT

ರಾಜ್ಯಕ್ಕೆ ಕೈತಪ್ಪಿತು 600 ವೈದ್ಯಕೀಯ ಸೀಟು

ನಾಲ್ಕು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಅನುಮತಿ ನೀಡದ ಎನ್‌ಎಂಸಿ

ರಾಜೇಶ್ ರೈ ಚಟ್ಲ
Published 10 ಡಿಸೆಂಬರ್ 2021, 2:53 IST
Last Updated 10 ಡಿಸೆಂಬರ್ 2021, 2:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಈ ಶೈಕ್ಷಣಿಕ ಸಾಲಿನಲ್ಲಿ (2021-22) ನಾಲ್ಕು ಜಿಲ್ಲೆಗಳಲ್ಲಿ ಹೊಸದಾಗಿ ಆರಂಭಿಸಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ವೈದ್ಯಕೀಯ ಕೋರ್ಸ್‌ನ(ಎಂಬಿಬಿಎಸ್‌) ಪ್ರವೇಶಾತಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿಲ್ಲ. ಹೀಗಾಗಿ, ಈ ವರ್ಷ ರಾಜ್ಯಕ್ಕೆ ಒಟ್ಟು 600 ವೈದ್ಯಕೀಯ ಸೀಟುಗಳು ಕೈತಪ್ಪಿವೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತವರು ಜಿಲ್ಲೆಯಾದ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಚಿಕ್ಕಮಗಳೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕಟ್ಟಡ, ಮೂಲ ಸೌಕರ್ಯಗಳು, ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆಯ ಕಾರಣ ನೀಡಿ ಸೀಟು ಮಂಜೂರಾತಿಗೆ ಎನ್ಎಂಸಿ ನಿರಾಕರಿಸಿದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಈ ವೈದ್ಯಕೀಯ ಕಾಲೇಜುಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಈ ನಾಲ್ಕೂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ತಲಾ 150 ಸೀಟುಗಳಿವೆ.

ADVERTISEMENT

ಆಯೋಗದ ಪರಿಶೀಲನಾ ತಂಡ (ಮೆಡಿಕಲ್ ಅಸೆಸ್ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್) ಈ ಜಿಲ್ಲೆಗಳ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಭೇಟಿ ನೀಡಿ ಇದೇ ಸೆ. 29ರಂದು ವರದಿ ಸಲ್ಲಿಸಿತ್ತು. ಆ ವರದಿಯ ಆಧಾರದಲ್ಲಿ ಆಯೋಗ ಈ ಕ್ರಮ ತೆಗೆದುಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ದಾಖಲಾತಿ ಅನುಮತಿ ನಿರಾಕರಿಸಿರುವ ಮಾಹಿತಿಯನ್ನು ಈಗಾಗಲೇ ಈ ನಾಲ್ಕೂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್‌ಗಳಿಗೆ ಎನ್ಎಂಸಿ ನೀಡಿದೆ. ಅಲ್ಲದೆ, ಕೊರತೆಗಳ ಪಟ್ಟಿಯನ್ನೂ ನೀಡಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಈ ಹಿಂದೆ ಭಾರತೀಯ ವೈದ್ಯಕೀಯ ಮಂಡಳಿ ಆಗಿತ್ತು) ರೂಪಿಸಿರುವ 19 ಮಾನದಂಡಗಳನ್ನು ಪೂರೈಸಿದರೆ ಮಾತ್ರ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ಅನುಮತಿ ಸಿಗುತ್ತದೆ. ಆಯೋಗದ ಪರಿಶೀಲನಾ ತಂಡವು ಪ್ರತಿ ವರ್ಷ ಅನುಮತಿ ನೀಡುವುದಕ್ಕೂ ಮೊದಲು ಕಾಲೇಜುಗಳಿಗೆ ಭೇಟಿ ನೀಡಿ ಮೂಲಸೌಕರ್ಯ, ಗ್ರಂಥಾಲಯ ಸೌಲಭ್ಯ, ಬೋಧಕ ಸಿಬ್ಬಂದಿ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತದೆ.

ಈ ನಾಲ್ಕು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳಾದ ಪ್ರಯೋಗಾಲಯ, ಪರೀಕ್ಷಾ ಕೊಠಡಿ, ಗ್ರಂಥಾಲಯ, ವಿದ್ಯಾರ್ಥಿ ನಿಲಯ, ಸಿಬ್ಬಂದಿ ನಿವಾಸಗಳು ನಿರ್ಮಾಣ ಹಂತದಲ್ಲಿದೆ. ಗ್ರಂಥಾಲಯ ಪುಸ್ತಕಗಳು, ಪತ್ರಿಕೆಗಳು, ಪ್ರಯೋಗಾಲಯಕ್ಕೆ ಅಗತ್ಯವಾದ ಸಾಮಗ್ರಿಗಳು, ಪೀಠೋಪಕರಣಗಳು ಇಲ್ಲ ಎಂದು ವರದಿಯಲ್ಲಿದೆ.

‘ಕೊರತೆಗಳನ್ನು ತುಂಬಲು ಮೂರು ವಾರಗಳ ಕಾಲಾವಕಾಶವನ್ನು ಎನ್ಎಂಸಿ ನೀಡಿದೆ. ಆದರೆ, ಅಷ್ಟೂ ಕೊರತೆಗಳನ್ನು ಕೆಲವೇ ದಿನಗಳಲ್ಲಿ ಭರ್ತಿ ಮಾಡುವುದು ಸುಲಭವಲ್ಲ. ಆದರೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆಗೆ ವೈದ್ಯಕೀಯ ಶಿಕ್ಷಣ ಸಚಿವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಎರಡನೇ ಬಾರಿಯೂ ತಿರಸ್ಕರಿಸಿದ ಎನ್‌ಎಂಸಿ

ಸೆ. 21ರಂದು ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಿದ್ದ ಕೊರತೆಗಳನ್ನು ಸರಿಪಡಿಸಿದ್ದು, ಮರು ಪರಿಶೀಲಿಸುವಂತೆ ಎನ್ಎಂಸಿಗೆ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಮನವಿ ಮಾಡಿತ್ತು. ಆ ಮನವಿಯಂತೆ, ಒದಗಿಸಿದ ಸೌಲಭ್ಯಗಳ ಬಗ್ಗೆ ಅ. 18ರಂದು ಸಂಸ್ಥೆಯ ಮುಖ್ಯಸ್ಥರ ಜೊತೆ ಸಂವಾದ ನಡೆಸಿದ ಎನ್ಎಂಸಿ ತಂಡ, ವರ್ಚುವಲ್ ವಿಚಾರಣೆ ಮತ್ತು ನೇರ ವಿಡಿಯೊ ಮೂಲಕ ಪರಿಶೀಲನೆ ನಡೆಸಿತ್ತು.

ಅದರೆ, ಇದರಿಂದ ತೃಪ್ತರಾಗದ ಎನ್ಎಂಸಿ ಅ. 25ರಂದು ಮತ್ತೆ ಪತ್ರ ಬರೆದು, 'ಕಾಲೇಜು ಕಟ್ಟಡ ಕಟ್ಟಲಾಗಿದೆ. ಆದರೆ, ಇನ್ನೂ ಪೀಠೋಪಕರಣಗಳು ಮತ್ತು ಇತರ ಉಪಕರಣಗಳನ್ನು ಒದಗಿಸಿಲ್ಲ. ಬೋಧಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಂಥ ಸ್ಥಿತಿಯಲ್ಲಿ ಪ್ರಸಕ್ತ ಸಾಲಿಗೆ ಎಂಬಿಬಿಎಸ್ ಪ್ರವೇಶಾತಿಗೆ ಮಂಜೂರಾತಿ ಕೊಡಲು ಸಾಧ್ಯ ಇಲ್ಲ. ಅಲ್ಲದೆ, ಈ ಬಗ್ಗೆ ಮತ್ತೊಮ್ಮೆ ಪತ್ರ ವ್ಯವಹಾರಕ್ಕೂ ಅವಕಾಶ ಇಲ್ಲ' ಎಂದು ಸ್ಪಷ್ಟಪಡಿಸಿದೆ.

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡವನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಲೀಸ್ ಆಧಾರದಲ್ಲಿ ಬಾಡಿಗೆಗೆ ಪಡೆಯಲಾಗಿದೆ. ಬೋಧಕ ಸಿಬ್ಬಂದಿಗೆ ಕ್ವಾಟರ್ಸ್ ಇಲ್ಲ. ಪ್ರಯೋಗಾಲಯ, ಗ್ರಂಥಾಲಯವೂ ಇಲ್ಲ. ಉಪಕರಣಗಳು, ಪುಸ್ತಕಗಳ ಖರೀದಿಯೂ ಆಗಿಲ್ಲ. ಎಲ್ಲ ಕಟ್ಟಡಗಳಿಗೆ ಪೀಠೋಪಕರಣಗಳನ್ನು ಇನ್ನೂ ಒದಗಿಸಿಲ್ಲ. ಆಸ್ಪತ್ರೆ ಕಾರ್ಯಾಚರಿಸುತ್ತಿದ್ದರೂ 18 ಹಾಸಿಗೆಗಳ ಕೊರತೆ ಇದೆ. ಅಲ್ಲದೆ, ತುರ್ತು ವಾರ್ಡ್, ಇತರ ಸೌಲಭ್ಯಗಳ ಕೊರತೆಯೂ ಇದೆ. ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೂ ಇದೇ ರೀತಿಯ ಕೊರತೆಗಳಿವೆ ಎಂದು ಎನ್ಎಂಸಿಯ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.