ADVERTISEMENT

ಲವ್‌ ಜಿಹಾದ್‌, ಓರ್ವ ಯುವತಿ ಮತಾಂತರಿಸಿದರೆ ₹5 ಲಕ್ಷ ಸಿಗುತ್ತಿದೆ : ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 12:31 IST
Last Updated 15 ಡಿಸೆಂಬರ್ 2022, 12:31 IST
   

ಕೋಲಾರ: ‘ರಾಜ್ಯದಲ್ಲಿ ನಿತ್ಯ ಲವ್‍ ಜಿಹಾದ್‌ ನಡೆಯುತ್ತಿದ್ದು, ಈ ಹಿಂದೆ ನಾವು ಎಷ್ಟೇ ಹೇಳಿದರೂ ಕಾಂಗ್ರೆಸ್‍ನವರು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಅಮಾಯಕ ಹೆಣ್ಣು ಮಕ್ಕಳು ಈ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಗುರುವಾರ ಇಲ್ಲಿ ಬಿಜೆಪಿ ಕಾರ್ಯಾಲಯದ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಗೃಹ ಸಚಿವನಾಗಿದ್ದಾಗ ಲವ್‌ ಜಿಹಾದ್ ಹಾಗೂ ಆ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕ್ರಮಕೈಗೊಂಡಿದ್ದೆ. ಹೆಣ್ಣು ಮಕ್ಕಳನ್ನು ಲವ್ ಜಿಹಾದ್‍ಗೆ ತಳ್ಳಲು ಯುವಕರಿಗೆ ಮೊದಲು ತರಬೇತಿ ನೀಡುತ್ತಾರೆ, ದ್ವಿಚಕ್ರ ವಾಹನ ಕೊಡಿಸುತ್ತಾರೆ, ಖರ್ಚಿಗೆ ಹಣ ಕೊಡುತ್ತಾರೆ. ಒಬ್ಬ ಯುವತಿಯನ್ನು ಮತಾಂತರ ಮಾಡಿದರೆ ₹ 5 ಲಕ್ಷದವರೆಗೆ ಸಿಗುತ್ತದೆ’ ಎಂದರು.

‘ಈ ಹಣದಲ್ಲಿ ಯುವಕರು ಜಿಮ್‌ನಲ್ಲಿ ದಂಡಿಸಿ ದೇಹ ಸದೃಢವಾಗಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಖರ್ಚು ಮಾಡುತ್ತಾರೆ. ಮದುವೆಯಾಗಿ ಎರಡು ತಿಂಗಳಲ್ಲಿ ಮತ್ತೆ ಇನ್ನೆರಡು ಮದುವೆ ಆಗುತ್ತಾರೆ. ಇವರೆಲ್ಲಾ ಗೋಮುಖ ವ್ಯಾಘ್ರಗಳು. ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ರೂಪದಲ್ಲಿ ಮೇಲೇಳುತ್ತಾರೆ. ದೇಶದ್ರೋಹಿ ಸಂಘಟನೆಗಳನ್ನು ಮಟ್ಟಹಾಕಬೇಕು. ಮತಾಂತರ ನಿಷೇಧ ಕಾಯ್ದೆಯ ಕಟ್ಟುನಿಟ್ಟಾಗಿ ಜಾರಿಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ADVERTISEMENT

ದೇಗುಲಗಳಲ್ಲಿ ಮೊಬೈಲ್ ನಿಷೇಧ: ‘ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ದೇವಾಲಯಗಳಲ್ಲಿಯೂ ಮೊಬೈಲ್ ನಿಷೇಧ ಮಾಡುವುದು ಒಳ್ಳೆಯದು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಬಳಿ ಮಾತನಾಡುತ್ತೇನೆ. ಮೊಬೈಲ್‍ ಕಿರಿಕಿರಿಯಿಂದ ಪೂಜಾರಿಗಳು ಮಂತ್ರ ಹೇಳುವುದಕ್ಕೂ ಕಷ್ಟವಾಗುತ್ತಿದೆ’ ಎಂದರು.

ಬಿಎಸ್‌ವೈ ಕಡೆಗಣನೆ; ಮಾಧ್ಯಮದ ಸೃಷ್ಟಿ
ಕಾರ್ಯಕ್ರಮಗಳಿಗೆ ಆಹ್ವಾನ ನೀಡದ್ದಕ್ಕೆ ಯಡಿಯೂರಪ್ಪ ಮುನಿಸಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌.ಅಶೋಕ, ‘ಇದು ಮಾಧ್ಯಮದ ಸೃಷ್ಟಿ. ಎಲ್ಲಾದರೂ ಯಡಿಯೂರಪ್ಪ ಈ ಬಗ್ಗೆ ಹೇಳಿದ್ದಾರಾ? ಎಲ್ಲಾ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಲಾಗಿದೆ. ಎಲ್ಲೆಲ್ಲಿಗೆ ಸಾಧ್ಯವೋ ಅಲ್ಲಿಗೆ ಬರುತ್ತಾರೆ. ಶಿಷ್ಟಾಚಾರದ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತಿವೆ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಅವರ ನೇತೃತ್ವದಲ್ಲೇ 2023ರ ವಿಧಾನಸಭೆ ಚುನಾವಣೆ ನಡೆಯಲಿದೆ. ಕಿಡಿಗೇಡಿಗಳಿಂದ ಅಪಪ್ರಚಾರ ನಡೆಯುತ್ತಿದೆ’ ಎಂದರು.

‘ಬೇರೆ ರಾಜ್ಯದ ಮಾಡೆಲ್‌ ಹೇರಲ್ಲ’
ರಾಜ್ಯದಲ್ಲಿ ನಡೆಯಲಿರುವ ಮುಂಬರುವ ಚುನಾವಣೆಯಲ್ಲೂ ಗುಜರಾತ್ ಮಾದರಿಯಲ್ಲಿ ಯುವಕರಿಗೆ ಬಿಜೆಪಿ ವರಿಷ್ಠರು ಆದ್ಯತೆ ನೀಡುವ ಕುರಿತು ಪ್ರತಿಕ್ರಿಯಿಸಿದ ಅಶೋಕ, ‘ಗುಜರಾತ್‌ ಮಾಡೆಲ್‍ಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಬೇರೆ ರಾಜ್ಯದ ಮಾಡೆಲ್‌ಗಳನ್ನು ಇನ್ನೊಂದು ರಾಜ್ಯದ ಮೇಲೆ ಹೇರಲ್ಲ. ಸ್ಥಳೀಯ ಜಾತಿ ಸಮುದಾಯ ಗಮನದಲ್ಲಿಟ್ಟುಕೊಂಡು ಟಿಕೆಟ್‌ ನೀಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.