ADVERTISEMENT

ತೆರಿಗೆ ಪಾಲು: ಮತ ‘ಪಾಲಿ’ಗೆ ಊರುಗೋಲು?

ಸುಬ್ರಹ್ಮಣ್ಯ ವಿ.ಎಸ್‌.
Published 2 ಏಪ್ರಿಲ್ 2024, 6:00 IST
Last Updated 2 ಏಪ್ರಿಲ್ 2024, 6:00 IST
<div class="paragraphs"><p>ತೆರಿಗೆ ಸಂಗ್ರಹ</p></div>

ತೆರಿಗೆ ಸಂಗ್ರಹ

   

ಬೆಂಗಳೂರು: ಕೇಂದ್ರ ಸರ್ಕಾರವು ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕರ್ನಾಟಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ ಎಂಬ ವಾದವನ್ನು ರಾಷ್ಟ್ರ ರಾಜಧಾನಿಯ ಅಂಗಳದವರೆಗೂ ಕೊಂಡೊಯ್ದಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರ, ಲೋಕಸಭಾ ಚುನಾವಣೆಯ ಅಂಗಳದಲ್ಲಿ ‘ರಾಷ್ಟ್ರೀಯವಾದ’ಕ್ಕೆ ಎದುರಾಗಿ ‘ಪ್ರಾದೇಶಿಕ ಅಸ್ಮಿತೆ’ಯ ಗುರಾಣಿಯನ್ನು ಒಡ್ಡಿದೆ.

ಸಂಪತ್ತಿನ ಹಂಚಿಕೆಯಲ್ಲಿನ ಅಸಮಾನತೆಯ ವಿಚಾರ ಸದ್ದು ಮಾಡುತ್ತಲೇ ಇದೆ. ಈ ಚರ್ಚೆ ಹೆಮ್ಮರವಾಗಿ ಬೆಳೆದು ಬಿಜೆಪಿಯ ‘ಮತ ಖಜಾನೆ’ಗೆ ತೂತು ಕೊರೆದು ತನಗೆ ಲಾಭ ತಂದು ಕೊಡಬಹುದು ಎಂಬ ಆಸೆ ಕಾಂಗ್ರೆಸ್‌ನಲ್ಲಿದ್ದರೆ, ಈ ಚರ್ಚೆಯನ್ನೇ ಗೌಣವಾಗಿಸಿ ನಷ್ಟದ ಹೊರೆ ಬೀಳದಂತೆ ತಪ್ಪಿಸಿಕೊಳ್ಳುವ ಕಾರ್ಯತಂತ್ರ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.

ADVERTISEMENT

ತೆರಿಗೆ ಪಾಲಿನ ಹಂಚಿಕೆ ಮತ್ತು ಅನುದಾನಗಳ ಬಿಡುಗಡೆ ವಿಷಯದಲ್ಲಿ ವರ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ತಣ್ಣನೆಯ ಜಟಾಪಟಿ ನಡೆಯುತ್ತಲೇ ಇತ್ತು. 2024ರ ಜನವರಿಯಲ್ಲೇ ಈ ವಿಚಾರಗಳನ್ನು ರಾಜಕೀಯ ಚರ್ಚೆಯ ಮುನ್ನೆಲೆಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಮೂರು ತಿಂಗಳವರೆಗೂ ಚರ್ಚೆಯ ಕಾವು ಕಳೆದುಕೊಳ್ಳದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಯಶ‌ಸ್ವಿಯಾಗಿದೆ.

ಆರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಮಾತಿನ ಸಮರಕ್ಕೆ ಸೀಮಿತವಾಗಿದ್ದ ‘ಸಂಪತ್ತಿನ ಹಂಚಿಕೆ’ಯ ವಿಷಯ ಈಗ ಕರ್ನಾಟಕದ ಉದ್ದಗಲಕ್ಕೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರವಾಗಿದೆ. ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಈ ವಿಚಾರವನ್ನು ವಿಸ್ತೃತವಾಗಿ ಚರ್ಚಿಸುವ, ಮಾಹಿತಿ ಹಂಚುವ ಕೆಲಸವೂ ಎಡೆಬಿಡದೆ ನಡೆಯುತ್ತಿದೆ. ರಾಜ್ಯ ಸರ್ಕಾರವೇ ಹೊತ್ತಿಸಿದ ಅಸಮಾಧಾನದ ಕಿಡಿಯನ್ನು ಜ್ವಾಲೆಯನ್ನಾಗಿ ಪರಿವರ್ತಿಸಲು ‘ಪ್ರಾದೇಶಿಕ ಅಸ್ಮಿತೆ’ಯ ಪರ ಇರುವವರು ಮಾಡುತ್ತಿದ್ದಾರೆ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಕೂಗು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ರಾಜ್ಯಕ್ಕೆ ₹ 1.87 ಲಕ್ಷ ಕೋಟಿ ನಷ್ಟ?:

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಂಚಿಕೆಯಲ್ಲಿನ ಅಸಮಾನತೆ ಕುರಿತು ರಾಜ್ಯ ಸರ್ಕಾರ ಚರ್ಚೆ ಆರಂಭವಾಗಿತ್ತು. ಸೆಸ್‌, ಸರ್‌ಚಾರ್ಜ್‌ಗಳ ರೂಪದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸ ಸೇರುತ್ತಿರುವ ಮೊತ್ತದಲ್ಲಿ ರಾಜ್ಯಕ್ಕೆ ಪಾಲು ದೊರಕುತ್ತಿಲ್ಲ ಎಂಬುದನ್ನೂ ಚರ್ಚೆಯ ವ್ಯಾಪ್ತಿಗೆ ತರಲಾಗಿದೆ. ಎಲ್ಲವೂ ಸೇರಿದಂತೆ 2019ರಿಂದ 2024ರ ಅವಧಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ₹ 1,87,687 ಕೋಟಿಯಷ್ಟು ನಷ್ಟವಾಗಿದೆ ಎಂಬ ಪ್ರಬಲವಾದ ವಾದವೊಂದನ್ನು ರಾಜ್ಯ ಸರ್ಕಾರ ಮಂಡಿಸಿದೆ.

ರಾಜ್ಯದಲ್ಲಿ ಸಂಗ್ರಹವಾಗುವ ಪ್ರತಿ ₹ 100 ತೆರಿಗೆಯಲ್ಲಿ ವಾಪಸ್‌ ರಾಜ್ಯಕ್ಕೆ ₹ 12ರಿಂದ ₹13ರಷ್ಟು ಮಾತ್ರ ಸಿಗುತ್ತಿದೆ ಎಂಬುದು ರಾಜ್ಯ ಸರ್ಕಾರದ ವಾದ. 15ನೇ ಹಣಕಾಸು ಆಯೋಗವು ತೆರಿಗೆ ಪಾಲು ಹಂಚಿಕೆಗೆ ರೂಪಿಸಿರುವ ಮಾನದಂಡಗಳಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದು, ಉತ್ತರದ ರಾಜ್ಯಗಳಿಗೆ ಸಿಂಹಪಾಲು ದೊರಕುತ್ತಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.

ಕೇಂದ್ರ ಸರ್ಕಾರ ಮಾತ್ರವಲ್ಲ, 2019ರಿಂದ 2023ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರವೂ ಕರ್ನಾಟಕಕ್ಕೆ ಆಗಿರುವ ನಷ್ಟಕ್ಕೆ ಹೊಣೆ ಎಂದು ಅಪಾದಿಸುತ್ತಿರುವ ರಾಜ್ಯ ಸರ್ಕಾರ, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದೆ.

ರಾಜ್ಯ ಸರ್ಕಾರದ ಆಪಾದನೆಗಳಿಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ನಷ್ಟದ ವಾದದಲ್ಲಿ ಹುರುಳೇ ಇಲ್ಲ ಎಂಬ ಪ್ರತಿವಾದ ಮಂಡಿಸಿದ್ದಾರೆ. ರಾಜ್ಯ ಸರ್ಕಾರ ಕಲ್ಪಿತ ಲೆಕ್ಕಾಚಾರಗಳ ಆಧಾರದಲ್ಲಿ ನಷ್ಟವನ್ನು ಬಿಂಬಿಸುತ್ತಿದೆ ಎಂಬುದು ಅವರ ಟೀಕೆ. ಕೇಂದ್ರದ ಹಲವು ಸಚಿವರು ಸೇರಿದಂತೆ ಬಿಜೆಪಿಯ ಅನೇಕ ನಾಯಕರು ನಿರ್ಮಲಾ ಮಾತಿಗೆ ದನಿಗೂಡಿಸಿದ್ದಾರೆ.

ಇಷ್ಟು ದಿನಗಳ ಕಾಲ ಪತ್ರ ಸಮರ, ಸಾಮಾಜಿಕ ಮಾಧ್ಯಮಗಳ ಚರ್ಚೆ, ಪತ್ರಿಕಾಗೋಷ್ಠಿಗಳಿಗೆ ಸೀಮಿತವಾಗಿದ್ದ ‘ತೆರಿಗೆ ಅನ್ಯಾಯ’ದ ವಿಷಯ ಈಗ ಚುನಾವಣಾ ಅಖಾಡದಲ್ಲಿ ಸವಾಲು– ಜವಾಬಿಗೆ ಕಾರಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.