ADVERTISEMENT

ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಆಮಿಷ| ಬಿಜೆಪಿಯ ಸೋಮಣ್ಣ ವಿರುದ್ಧ ಎಫ್‌ಐಆರ್

ಚಾಮರಾಜನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗೆ ಆಮಿಷ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 15:33 IST
Last Updated 29 ಏಪ್ರಿಲ್ 2023, 15:33 IST
ವಿ. ಸೋಮಣ್ಣ
ವಿ. ಸೋಮಣ್ಣ   

ನವದೆಹಲಿ: ನಾಮಪತ್ರ ಹಿಂಪಡೆಯುವಂತೆ ಚಾಮರಾಜನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) ಅವರಿಗೆ ಆಮಿಷ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವರೂ ಆಗಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಚಾಮರಾಜನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

‘ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೊಡ್ತೀವಿ. ಮೊದಲು ನಾಮಪತ್ರ ವಾಪಸ್ ತಗೊ' ಎಂದು ಮಲ್ಲಿಕಾರ್ಜುನಸ್ವಾಮಿ ಅವರಿಗೆ ಸೋಮಣ್ಣ ಕರೆ ಮಾಡಿ ಹೇಳಿರುವ ಆಡಿಯೊ ತುಣುಕು ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು, ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿತ್ತು. ಸೋಮಣ್ಣ ವಿರುದ್ಧ ಐಪಿಸಿ 1860ರ ಸೆಕ್ಷನ್‌ 171ಇ ಹಾಗೂ 171ಎಫ್‌ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಲಂಚ ನೀಡುವುದನ್ನು, ಮತದಾರರು ಹಾಗೂ ಅಭ್ಯರ್ಥಿಗಳಿಗೆ ಬೆದರಿಕೆ ಹಾಕುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಆಯೋಗ ರವಾನಿಸಿದೆ. ಜತೆಗೆ, ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ರಾಜ್ಯ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಆಯೋಗ ನಿರ್ದೇಶನ ನೀಡಿದೆ. 

ADVERTISEMENT

ಪ್ರಸಕ್ತ ಚುನಾವಣೆಯಲ್ಲಿ ಯಾವುದೇ ರೀತಿಯ ಭ್ರಷ್ಟ ಅಭ್ಯಾಸಗಳನ್ನು ಸಹಿಸುವುದಿಲ್ಲ ಎಂದು ಸಂದೇಶ ರವಾನಿಸಿರುವ ಕೇಂದ್ರ ಚುನಾವಣಾ ಆಯುಕ್ತರು, ‘ರಾಜ್ಯ ಚುನಾವಣಾ ಅಧಿಕಾರಿಯವರು ತಳಮಟ್ಟದ ಪರಿಸ್ಥಿತಿ ಪರಿಶೀಲಿಸಬೇಕು ಮತ್ತು ಅಭ್ಯರ್ಥಿಗಳು ಮತದಾರರ ಮೇಲೆ ಆಮಿಷ ಅಥವಾ ಬೆದರಿಕೆ ಒಡ್ಡುವ ಪ್ರಯತ್ನ ತಡೆಗಟ್ಟುವ ಸಲುವಾಗಿ, ಇತರ ಭ್ರಷ್ಟ ಅಭ್ಯಾಸಗಳನ್ನು ನಿಗ್ರಹಿಸುವ ಸಲುವಾಗಿ ಸಾಮಾಜಿಕ ಜಾಲತಾಣದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು’ ಎಂದೂ ತಾಕೀತು ಮಾಡಿದ್ದಾರೆ. 

ಮುಂದೇನು ಪರಿಣಾಮ?

ಭ್ರಷ್ಟ ಆಚರಣೆಗಳ ಕಾರಣಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 123 ಅಡಿ ಈ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಬಹುದು ಹಾಗೂ ಕಾಯ್ದೆಯ ಸೆಕ್ಷನ್‌ 8 (1) (ಎ) ಅಡಿಯಲ್ಲಿ ಅಭ್ಯರ್ಥಿಯನ್ನು ಚುನಾವಣೆಯಿಂದ ಅನರ್ಹಗೊಳಿಸಬಹುದು ಎಂದು ಆಯೋಗದ ಉನ್ನತ ಮೂಲಗಳು ತಿಳಿಸಿವೆ.  ಸೆಕ್ಷನ್‌ 171 ಇ (ಲಂಚ ಸ್ವೀಕರಿಸಿದ ಆರೋಪ): ಈ ಆರೋಪ ಸಾಬೀತಾದಲ್ಲಿ ಒಂದು ವರ್ಷದ ಸೆರೆವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ.  ಸೆಕ್ಷನ್‌ 171 ಎಫ್‌ (ಚುನಾವಣೆಯಲ್ಲಿ ಆಮಿಷ ಒಡ್ಡಿದ ಆರೋಪ): ಈ ಆರೋಪ ಸಾಬೀತಾದಲ್ಲಿ ಆರೋಪಿಗೆ ಒಂದು ವರ್ಷದ ಸೆರೆವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.