ADVERTISEMENT

ಮದೀನಾ ದುರಂತ: ಗನಿ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ನೆರವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 15:39 IST
Last Updated 18 ನವೆಂಬರ್ 2025, 15:39 IST
M S MANJUNATH
   M S MANJUNATH

ಬೆಂಗಳೂರು: ಸೌದಿ ಅರೇಬಿಯಾದ ಮಕ್ಕಾದಿಂದ ಮದೀನಾಕ್ಕೆ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ ಹೊತ್ತಿ ಉರಿದ ಘಟನೆಯಲ್ಲಿ ಮೃತಪಟ್ಟ ಹುಬ್ಬಳ್ಳಿಯ ಅಬ್ದುಲ್ ಗನಿ ಶಿರಹಟ್ಟಿ ಅವರ ಕುಟುಂಬಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ನೆರವಾಗಿದ್ದಾರೆ.

ಅಬ್ದುಲ್ ಗನಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬದ ಸದಸ್ಯರಾದ ಉಮರ್ ಸಾಬ್, ಮೌಲಾ ಅಲಿ, ಮೈನುದ್ದೀನ್ ಮಖಂದರ್ ಅವರು ಮಂಗಳವಾರ ಬೆಂಗಳೂರಿಂದ ಮದೀನಾಗೆ ತೆರಳಿದರು. ಈ ಮೂವರಿಗೂ ವೀಸಾ ಸೇರಿದಂತೆ ವಿಮಾನ ಟಿಕೆಟ್, ಉಳಿದುಕೊಳ್ಳಲು ಹೋಟೆಲ್ ಹಾಗೂ ಇತರೆ ವ್ಯವಸ್ಥೆಯನ್ನು ಜಮೀರ್ ಅಹಮದ್ ಮಾಡಿಕೊಟ್ಟಿದ್ದಾರೆ.

ಮೃತಪಟ್ಟವರ ಅಂತ್ಯಕ್ರಿಯೆ ನಂತರ, ಉಮರ್, ಮೌಲಾ ಹಾಗೂ ಮೈನುದ್ದೀನ್‌ ಅವರು ಉಮ್ರಾ ಯಾತ್ರೆ ಮಾಡಿ ವಾಪಸ್ ಬರಲು ಸಚಿವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮಾರ್ಗ ಮಧ್ಯೆ ವೆಚ್ಚಕ್ಕೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ.

ADVERTISEMENT

ಅಬ್ದುಲ್ ಗನಿ ಕುಟುಂಬ ಸದಸ್ಯರು ಮದೀನಾಗೆ ತೆರಳಲು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ವ್ಯವಸ್ಥೆ ಮಾಡಿದರು. ಅವರ ಕುಟುಂಬಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ಕಲ್ಪಿಸುವಂತೆ ಹಜ್ ಸಮಿತಿ ಕಾರ್ಯನಿರ್ವಹಣಾಧಿಕಾರಿ ಸರ್ಫರಾಜ್ ಖಾನ್ ಅವರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.