ADVERTISEMENT

ಮಹದಾಯಿ: ಕೇಂದ್ರ ಸರ್ಕಾರಕ್ಕೆ ರಾಜ್ಯ ಸಡ್ಡು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 19:28 IST
Last Updated 9 ಜುಲೈ 2025, 19:28 IST
<div class="paragraphs"><p>ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ &nbsp;(ಸಂಗ್ರಹ ಚಿತ್ರ)</p></div>

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ  (ಸಂಗ್ರಹ ಚಿತ್ರ)

   

ನವದೆಹಲಿ: ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದಿಂದ ವನ್ಯಜೀವಿ ಹಾಗೂ ಅರಣ್ಯ ಅನುಮೋದನೆ ಸಿಗುವ ಮುನ್ನವೇ ಮಹದಾಯಿ ಯೋಜನೆಯ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಮೂಲಕ ಕೇಂದ್ರ ಸರ್ಕಾರ ಹಾಗೂ ಗೋವಾ ಸರ್ಕಾರಕ್ಕೆ ಸಡ್ಡು ಹೊಡೆಯಲು ತೀರ್ಮಾನಿಸಿದೆ. 

ಕೇಂದ್ರ ಅರಣ್ಯ ಹಾಗೂ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಬಿನ್ನವತ್ತಳೆ ಸಲ್ಲಿಸಿದ ಬಳಿಕ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ಈ ಬಗ್ಗೆ ಸುಳಿವು ನೀಡಿದರು. 

ADVERTISEMENT

ಮಂಗಳವಾರ ಇಲ್ಲಿ ಕಾನೂನು ತಜ್ಞರು ಹಾಗೂ ಉನ್ನತ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಶಿವಕುಮಾರ್, ‘ಗೋವಾ ಸರ್ಕಾರವು ವ್ಯಾಪ್ತಿ ಮೀರಿ ನೋಟಿಸ್‌ ನೀಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ಈ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಈ ಅರ್ಜಿ ಹಿಂಪಡೆದರೆ ಹೇಗೆ’ ಎಂದು ಪ್ರಶ್ನಿಸಿದರು. ಅರ್ಜಿ ಹಿಂಪಡೆಯಬಹುದು ಎಂದು ಕಾನೂನು ತಜ್ಞ ಮೋಹನ ಕಾತರಕಿ ಸಲಹೆ ನೀಡಿದರು. 

‘ಮಹದಾಯಿ ಯೋಜನೆಯ ಕಾಮಗಾರಿ ಆರಂಭಿಸಬಹುದು ಎಂದು ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ಎರಡು ವರ್ಷಗಳ ಹಿಂದೆಯೇ ಟೆಂಡರ್‌ ಕರೆಯಲಾಗಿತ್ತು. ಇದರ ನಡುವೆ, ಗೋವಾದವರು ತಕರಾರು ಎತ್ತಿದರು. ಈ ಬಗ್ಗೆ ಕಾನೂನು ತಜ್ಞರ ಸಲಹೆ ಕೇಳಲಾಗಿದೆ. ಅರ್ಜಿ ಹಿಂಪಡೆದು ಕಾಮಗಾರಿ ಆರಂಭಿಸಲು ಯೋಜಿಸಲಾಗಿದೆ. ಮುಖ್ಯಮಂತ್ರಿ ಜತೆ  ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು. 

ಖಾತೆಗೆ ಹಣ ಬರುವವರೆಗೂ ಖಾತರಿ ಇಲ್ಲ

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೇಳಿದ್ದೇವೆ. ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದನ್ನು ಸಲ್ಲಿಸಿದ್ದೇವೆ. ಯೋಜನೆಗೆ ಈಗಾಗಲೇ ₹10,604 ಕೋಟಿ ಖರ್ಚು ಮಾಡಿದ್ದೇವೆ. ಅನುದಾನ ನೀಡುತ್ತೇವೆ ಎಂದು ಕೇಂದ್ರ ಜಲಶಕ್ತಿ ಸಚಿವರು ಭರವಸೆ ನೀಡಿದ್ದಾರೆ. ಸರ್ಕಾರದ ಖಾತೆಗೆ ಹಣ ಬರುವವರೆಗೂ ನಂಬಿಕೆಯಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಮಗೆ ಸಹಕಾರ ನೀಡಿದರೆ ಗೋವಾದವರಿಗೂ ಸಹಕಾರ

‘ಗೋವಾ–ತಮ್ನಾರ್ ವಿದ್ಯುತ್‌ ಮಾರ್ಗಕ್ಕೆ ನಾವು ತಕರಾರು ಎತ್ತಿದ್ದೇವೆ ಎಂದು ಗೋವಾ ಸರ್ಕಾರವು ಕೇಂದ್ರಕ್ಕೆ ದೂರಿದ್ದಾರೆ. ನೀವು ನಮಗೆ ಸಹಕಾರ ನೀಡುವುದಾದರೆ ನಾವು ನಿಮಗೆ ನೀಡುತ್ತೇವೆ ಎಂದು ಹೇಳಿದ್ದೇವೆ. ಒಂದು ವಾರದಲ್ಲಿ ಅಭಿಪ್ರಾಯ ತಿಳಿಸುವುದಾಗಿ ಕೇಂದ್ರ ಪರಿಸರ ಸಚಿವರು ಹೇಳಿದ್ದಾರೆ. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡುತ್ತೇನೆ’ ಎಂದರು.

ಜುಲೈನಲ್ಲೇ ಕೃಷ್ಣಾ ಸಭೆ

‘ಕೃಷ್ಣಾ ಜಲವಿವಾದದ ಬಗ್ಗೆ ಕೇಂದ್ರ ಸರ್ಕಾರ ಕರೆದ ಸಭೆ ಎರಡು ಸಲ ರದ್ದಾಗಿತ್ತು. ಜುಲೈ ತಿಂಗಳಿನಲ್ಲಿಯೇ ಮತ್ತೊಮ್ಮೆ ಸಭೆ ಕರೆಯುವುದಾಗಿ ಜಲಶಕ್ತಿ ಸಚಿವರು ತಿಳಿಸಿದ್ದಾರೆ. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದರೂ 10 ವರ್ಷದಿಂದ ನಮ್ಮ ಪಾಲಿನ ನೀರು ಸಿಗದೇ ಕಾಯುತ್ತಿದ್ದೇವೆ. 1.40 ಲಕ್ಷ ಎಕರೆಗೆ ನೀರಾವರಿ ನೀಡಲು ನಾವು ತಯಾರಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ಒಪ್ಪಂದವೂ ಆಗಿದೆ. ಕೇಂದ್ರದಿಂದ ಗೆಜೆಟ್ ಅಧಿಸೂಚನೆ ಮಾತ್ರ ಆಗಬೇಕು. ನಮ್ಮ ನೀರನ್ನು ಬಳಸಿಕೊಳ್ಳುವುದಕ್ಕೆ ಮಹಾರಾಷ್ಟ್ರ ಏಕೆ ತಕರಾರು ಹಾಕಬೇಕು’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.