ADVERTISEMENT

'ಮಹದಾಯಿ ನದಿ ನೀರು ವಿವಾದ: ನ್ಯಾಯಮಂಡಳಿ ತೀರ್ಮಾನವೇ ಅಂತಿಮ'

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 13:12 IST
Last Updated 30 ಜನವರಿ 2021, 13:12 IST
   

ಕಾರವಾರ: ‘ಮಹದಾಯಿ ನದಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಏನು ಬೇಕಾದರೂ ಹೇಳಲಿ, ಅದನ್ನು ತೀರ್ಮಾನ ಮಾಡಲು ನ್ಯಾಯಮಂಡಳಿಯಿದೆ’ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಪ್ರಸಿದ್ಧಿಗೆ ಬರಲು ಯಾರು ಏನು ಬೇಕಾದರೂ ಹೇಳ್ತಾರೆ.
ಯಾವ ಹೇಳಿಕೆಗೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಒಬ್ಬ ವ್ಯಕ್ತಿ ಹೇಳಿದರೆ ಏನಾಗುತ್ತದೆ' ಎಂದು ಪ್ರಶ್ನಿಸಿದರು.

'ಮಹಾದಾಯಿ ನದಿ ನಮ್ಮ ತಾಯಿ, ಗೋವಾ ರಾಜ್ಯದ ಜೀವನದಿ. ಅದರಿಂದ ಕರ್ನಾಟಕಕ್ಕೆ ನೀರು ಕೊಡಲ್ಲ' ಎಂದು ಪ್ರಮೋದ ಸಾವಂತ್ ಹೇಳಿದ್ದರು.

ADVERTISEMENT

'ಇವತ್ತು ಗೋವಾ ಮುಖ್ಯಮಂತ್ರಿ, ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕೊಡ್ತಾರೆ. ಇದಕ್ಕೆಲ್ಲ ನಾವು ಪ್ರತಿಕ್ರಿಯಿಸುತ್ತ ಹೋದರೆ ಕಾಲಹರಣವಾಗುತ್ತದೆ ಅಷ್ಟೇ. ಮಹದಾಯಿ ವಿಚಾರದಲ್ಲಿ ಸಂವಿಧಾನ ಬದ್ಧವಾದ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಸುಪ್ರೀಂಕೋರ್ಟ್ ಏನು ತೀರ್ಮಾನ ಕೊಡುತ್ತದೆಯೋ ಅದಕ್ಕೆ ತಲೆ ಬಾಗುತ್ತೇವೆ' ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತು ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 'ಯಾರೋ ಒಬ್ಬರ ಹೇಳಿಕೆಗೆ ಬಹಳ ಮಹತ್ವ ಇಲ್ಲ. ಯತ್ನಾಳ ಹೇಳಿಕೆಯನ್ನು ನಾವು ಗಂಭೀರವಾಗಿ ಆಗಿ ತೆಗೆದುಕೊಂಡಿಲ್ಲ. ಅವರ ಸಮಾದಾನಕ್ಕೆ ಹೇಳಿಕೆ ಕೊಡುತಿದ್ದಾರೆ. ಪಕ್ಷದ ಪರಿಮಿತಿಯನ್ನು ಮೀರಿ ಇವರೇ ಹೇಳಿಕೆ ಕೊಡುತ್ತಿರುವುದನ್ನು ಪಕ್ಷ ಯಾವತ್ತೂ ಕ್ಷಮಿಸುವುದಿಲ್ಲ' ಎಂದರು.

'ರಾಜ್ಯದಿಂದ ಕೇಂದ್ರ ಶಿಸ್ತು ಸಮಿತಿಗೆ ಇವರ ಬಗ್ಗೆ ದೂರು ಸಲ್ಲಿಸಿದ್ದೇವೆ. ಕ್ರಮ ತೆಗೆದುಕೊಳ್ಳುತ್ತಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರ ಜೊತೆ ಕೂತು ಚರ್ಚೆ ಮಾಡಿ ಎಲ್ಲಾ ಸಮಸ್ಯೆ ಬಗೆಹರಿಸಿದ್ದಾರೆ' ಎಂದು ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, 'ಅವರು ಅಪೇಕ್ಷೆ ಪಡುವುದು ತಪ್ಪಲ್ಲ. ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ವಾಲ್ಮೀಕಿ ಸಮಾಜಕ್ಕೆ ಶೇ 3ರಿಂದ ಶೇ 7ರ ಮೀಸಲು ಬೇಡಿಕೆ ಇದೆ. ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಯಾವುದು ಸಿಂಧು ಯಾವುದು ಅಸಿಂಧು ಎಂಬುದನ್ನು ರಾಜ್ಯ, ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತವೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.