ವಿಜಯಪುರ:ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಈ ಮೂಲಕ ಮೇಲ್ಮನೆಯಲ್ಲಿ ಪಕ್ಷ ಬಹುಮತ ಸಾಧಿಸಲಿದ್ದು, ಬಿಲ್ ಪಾಸ್ ಮಾಡಿಕೊಳ್ಳಲು ಸರ್ಕಾರಕ್ಕೆ ಸಹಾಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಿಟಿಜಿಟಿ ಮಳೆಯ ನಡುವೆ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜನ ಸ್ವರಾಜ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಅನೇಕ ಸಂಕಷ್ಟ, ಸವಾಲುಗಳ ಬಳಿಕ ನನ್ನ ಆತ್ಮೀಯ ಮಿತ್ರ ಪಿ.ಎಚ್.ಪೂಜಾರಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ನಾನೇ ಅಭ್ಯರ್ಥಿ ಎಂದು ತಿಳಿದು ಅವರನ್ನು ಗೆಲ್ಲಿಸಿ’ ಮನವಿ ಮಾಡಿದರು.
‘ಅವಳಿ ಜಿಲ್ಲೆಯಲ್ಲಿ ಹಳ್ಳಿ, ಹಳ್ಳಿ ಸುತ್ತಾಡಿ ಪಕ್ಷ ಕಟ್ಟುವಲ್ಲಿ ಪಿ.ಎಚ್.ಪೂಜಾರ ನನ್ನೊಂದಿಗೆ ಶ್ರಮಿಸಿದ ದಿನಗಳನ್ನು ಎಂದಿಗೂ ಮರೆಯಲಾಗದು. ವಾಜಪೇಯಿ, ಅಡ್ವಾಣಿ, ಮುರುಳಿ ಮನೋಹರ ಜೋಶಿ ಅವರಂತ ನಾಯಕರು ಜಿಲ್ಲೆಗೆ ಬಂದಾಗ ಸಭೆ, ಸಮಾರಂಭಗಳಿಗೆ ಜನರನ್ನು ಸೇರಿಸುವಲ್ಲಿ ನಾವಿಬ್ಬರು ಪಟ್ಟ ಕಷ್ಟ ಅಷ್ಟಿಷ್ಟಲ್ಲ’ ಎಂದು ನೆನಪಿಸಿಕೊಂಡರು.
ಜನ ಸ್ವರಾಜ್ ಸಮಾವೇಶ ಕೇವಲ ಚುನಾವಣೆ ಉದ್ದೇಶದಿಂದ ಹಮ್ಮಿಕೊಂಡಿಲ್ಲ. ಜನರ ಸಮಸ್ಯೆ ಅರಿತು ಪರಿಹಾರ ನೀಡಲು ನಡೆಸುತ್ತಿರುವುದಾಗಿ ಹೇಳಿದರು.
ಭಾರೀ ಮಳೆಯ ಪರಿಣಾಮ ನಾಡಿನ ರೈತರ ಶೇ 70–80ರಷ್ಟು ಬೆಳೆ ಹಾನಿಯಾಗಿದೆ. ಕೇಂದ್ರ ತಂಡ ಅಧ್ಯಯನಕ್ಕೆ ಬರಬೇಕಿದೆ. ಪರಿಶೀಲನೆ ನಡೆಸಿ ಪರಿಹಾರ ನೀಡಬೇಕಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡುತ್ತೇನೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆ,ಮುಂದೆ ನೋಡುವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೊಮ್ಮಾಯಿ ಅವರಿಗೆ ಜವಾಬ್ದಾರಿ ವಹಿಸಿದ್ದೇನೆ. ರಾಜೀನಾಮೆ ಕೊಟ್ಟು ಮನೆಯಲ್ಲಿ ಸುಮ್ಮನೇ ಕೂರುವುದಕ್ಕಲ್ಲ, ರಾಜ್ಯದಾದ್ಯಂತ ಪ್ರವಾಸ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲಿಸಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುಲು ಶ್ರಮಿಸುತ್ತೇನೆ ಎಂದು ಹೇಳಿದರು.
ನನ್ನ ಅವಧಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರ ಗೌರವಧನವನ್ನು ₹ 250 ರಿಂದ ₹ 1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಕೆಲಸ ಆಗಿದೆ ಎಂದು ಹೇಳಿದರು.
ನಾನಾಗಲಿ, ಪ್ರಧಾನಿ ಮೋದಿ ಅವರಾಗಲಿ ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವವಿಲ್ಲದೇ ಹತ್ತುಹಲವು ಜನಪರ ಯೋಜನೆ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಸಚಿವ ಶ್ರೀರಾಮಲು ಮಾತನಾಡಿ, ಪ್ರಧಾನಿ ಮೋದಿ ಆಲ್ ಟೈಂ ಲೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಪಕ್ಷಕ್ಕೆ ಆನೆಬಲ ಇದ್ದಂತೆ ಎಂದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಕ್ಷೇತ್ರದಲ್ಲಿ ಗೆಲ್ಲುವ ಶಕ್ತಿ ಬಿಜೆಪಿಗೆ ಇದೆ. ಪಕ್ಷದ ನಾಯಕರು ಸೂಕ್ತ ಮಾರ್ಗದರ್ಶನ, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಅರುಣ ಶಹಪುರ, ಹಣಮಂತ ನಿರಾಣಿ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳಬ್ಬಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಆರ್.ಎಸ್.ಪಾಟೀಲ ಕೂಚಬಾಳ, ಅಶೋಕ ಅಲ್ಲಾಪುರ, ಶಿವರುದ್ರ ಬಾಗಲಕೋಟ, ಉಮೇಶ ಕೋಳಕೂರ ಇದ್ದರು.
***
ಪಿ.ಎಚ್.ಪೂಜಾರ ವಿಧಾನ ಪರಿಷತ್‌ನ ಪ್ರಭಾವಿ ಸದಸ್ಯರಾಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ಶ್ರಮಿಸಲಿದ್ದಾರೆ
–ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
***
ನಾನು ಯಡಿಯೂರಪ್ಪ ಶಿಷ್ಯನಾಗಿದ್ದೇನೆ. ಅವಳಿ ಜಿಲ್ಲೆಯಲ್ಲಿ 30 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ
–ಪಿ.ಎಚ್.ಪೂಜಾರ, ಅಭ್ಯರ್ಥಿ, ವಿಧಾನ ಪರಿಷತ್
***
ಪಿ.ಎಚ್.ಪೂಜಾರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಕೈ ಬಲಪಡಿಸಬೇಕು, ಬೊಮ್ಮಾಯಿ ಬೆಂಬಲಿಸಬೇಕು, ಯಡಿಯೂರಪ್ಪ ನಾಯಕತ್ವಕ್ಕೆ ಬೆಲೆ ನೀಡಬೇಕು
–ಗೋವಿಂದ ಕಾರಜೋಳ,ಸಚಿವ
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.