ADVERTISEMENT

ಕೋವಿಡ್‌ ಲಸಿಕೆಯ ಅಭಿವೃದ್ಧಿ ತಾಣವಾಗುವತ್ತ ಭಾರತ: ಕ್ಷೇತ್ರದ ಪ್ರಮುಖರ ಅಭಿಮತ

ಪ್ರವೀಣ ಕುಮಾರ್ ಪಿ.ವಿ.
Published 18 ನವೆಂಬರ್ 2021, 16:53 IST
Last Updated 18 ನವೆಂಬರ್ 2021, 16:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಲಸಿಕೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತದ ಸಾಧನೆ ಗಮನಾರ್ಹ. ಅಗಾಧ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಸಿದ್ಧಿಸಿಕೊಂಡಿರುವ ನಾವು ದೇಸಿ ತಂತ್ರಜ್ಞಾನ ಬಳಸಿಯೇಉತ್ಕೃಷ್ಟ ಲಸಿಕೆ ಅಭಿವೃದ್ಧಿಪಡಿಸುವತ್ತ ಚಿತ್ತ ಹರಿಸಬೇಕಿದೆ’ ಎಂದು ಲಸಿಕೆಗಳ ಉತ್ಪಾದನೆಯಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳ ಪ್ರಮುಖರು ಅಭಿಪ್ರಾಯಪಟ್ಟರು.

‘ಬೆಂಗಳೂರು ತಂತ್ರಜ್ಞಾನ ಶೃಂಗ 2021’ದಲ್ಲಿ ಗುರುವಾರ ‘ಲಸಿಕೆ ಕ್ಷೇತ್ರದಲ್ಲಿ ಭಾರತದ ನಾಯಕತ್ವ’ ಕುರಿತ ಸಂವಾದದಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು.

ಎಪಿಐ ಆ್ಯಂಡ್ ಕಸ್ಟಮ್‌ ಫಾರ್ಮಸ್ಯುಟಿಕಲ್ಸ್‌ ಸರ್ವೀಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಪ್ರಾ, ‘ಭಾರತವನ್ನು ಲಸಿಕೆ ಉತ್ಪಾದನೆಯ ಪ್ರಮುಖ ತಾಣವನ್ನಾಗಿ ರೂಪಿಸಬೇಕಿದೆ. ಇದಕ್ಕಾಗಿ ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ. ಅಗಾಧ ಸಂಖ್ಯೆಯಲ್ಲಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ನಾವು ಉತ್ಕೃಷ್ಟ ಲಸಿಕೆಯನ್ನು ಸಂಪೂರ್ಣ ದೇಸಿ ತಂತ್ರಜ್ಞಾನ ಬಳಸಿಯೇ ಅಭಿವೃದ್ಧಿಪಡಿಸುವಂತಾಗಬೇಕು. ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ಒತ್ತು ನೀಡಬೇಕು’ ಎಂದರು.

ADVERTISEMENT

ನೋವೋಝೈಮ್ಸ್‌ನ ಪ್ರಾದೇಶಿಕ ಅಧ್ಯಕ್ಷ ಡಾ.ಕೃಷ್ಣಮೋಹನ್ ಪಿ.,`ಕೊವ್ಯಾಕ್ಸಿನ್‌ನ ಅಭಿವೃದ್ಧಿಪಡಿಸಿದ ಅನುಭವ ಅವಿಸ್ಮರಣೀಯ. ನಾವು 2020ರ ಮೇನಲ್ಲಿ ಈ ಸವಾಲಿನ ಕಾರ್ಯಕ್ಕೆ ಅಡಿ ಇಟ್ಟೆವು. ಮುಂದಿನ ಜನವರಿಯಲ್ಲಿ ಲಸಿಕೆಯು ಪ್ರಯೋಗಕ್ಕೆ ಸಿದ್ಧವಾಗಿತ್ತು. ಈ ಕುರಿತ 10 ಸಂಶೋಧನಾ ಪ್ರಬಂಧಗಳು ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದರ ಮೂರನೇ ಹಂತದ ಪ್ರಯೋಗಗಳ ದಾಖಲೆಗಳೂ ಶೀಘ್ರವೇ ಬಿಡುಗಡೆಯಾಗಲಿವೆ’ ಎಂದರು.

‘ಲಸಿಕೆಗಳಿಗೆ ಮಂಜೂರಾತಿ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ಆಡಳಿತ ವ್ಯವಸ್ಥೆ 10 ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ನಮ್ಮ ದೇಶದ ನಿಯಂತ್ರಣ ವ್ಯವಸ್ಥೆಯಲ್ಲಿ ಮಂಜೂರಾತಿ ಪಡೆದ ಐದು ಲಸಿಕೆಗಳು ವಿಶ್ವಸಂಸ್ಥೆಯ ಮಾನ್ಯತೆ ಪಡೆಯುವ ಹಂತ ತಲುಪಿವೆ. ವಿಶ್ವಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿ ಮಂಜೂರಾತಿ ವ್ಯವಸ್ಥೆಯಲ್ಲಿ ತರಬೇಕಾದ ಸುಧಾರಣೆಗೆ ಸಂಬಂಧಿಸಿದಂತೆಇಲ್ಲಿನ ಅಧಿಕಾರಿಗಳಿಗೆ ಕೆನಡಾದಂತಹ ದೇಶಗಳಿಂದ ತರಬೇತಿ ಕೊಡಲಾಗಿದೆ. ಲಸಿಕೆಯಿಂದಾಗುವ ಅಪಾಯ ನಿರ್ವಹಣೆಗೆ ಸಂಬಂಧಿಸಿದಂತೆ ಸುಧಾರಣೆಗಳು ಆಗಬೇಕಿದೆ’ ಎಂದರು.

ಅರಬಿಂದೋ ಫಾರ್ಮಾದ ಹಿರಿಯ ಉಪಾಧ್ಯಕ್ಷೆ ಡಾ.ದಿವ್ಯಾ ಬಿಜಲ್ವಾನ್,`ದೇಶದಲ್ಲಿ ವಿಜ್ಞಾನ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ, ಅಂತಹವರನ್ನು ಗುರುತಿಸಿ, ಮನ್ನಣೆ ನೀಡುವ ವಾತಾವರಣ ನಮ್ಮಲ್ಲಿಲ್ಲ. ಇದರ ಬಗ್ಗೆ ಲಸಿಕೆ ಮತ್ತು ಔಷಧ ಕಂಪನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಅನಿಶ್ಚಿತ ಸಂಶೋಧನೆಗೆ ನೆರವು ಹೆಚ್ಚಲಿ’

‘ಲಸಿಕೆ ಅಭಿವೃದ್ಧಿಪಡಿಸುವಂತಹ, ಯಶಸ್ಸಿನ ಬಗ್ಗೆ ಖಚಿತತೆ ಇಲ್ಲದಂತಹ ಸಂಶೋಧನೆಗಳಿಗೆ ಹಣಕಾಸು ನೆರವು ಒದಗಿಸುವಿಕೆ ದೇಶದಲ್ಲಿ ಹೆಚ್ಚಿಸುವ ಮೂಲಕ ಪೂರಕ ವಾತಾವರಣ ರೂಪಿಸಬೇಕಿದೆ. ಇದುವರೆಗೆ ಇಂತಹ ಸಂಶೋಧನೆಗೆ ಕಾರ್ಪೊರೇಟ್‌ ಸಂಸ್ಥೆಗಳ ಬಂಡವಾಳ ಮಾತ್ರ ಲಭ್ಯವಿತ್ತು. ಕೇಂದ್ರ ಸರ್ಕಾರವು ಈಗ ಯೋಜನೆಗಳಿಗೆ ಕನಿಷ್ಠ ₹ 50 ಲಕ್ಷರಿಂದ ಗರಿಷ್ಠ ₹ 50 ಕೋಟಿವರೆಗೂ ನೆರವು ನೀಡುತ್ತಿದೆ. ಇದರ ಸದ್ಬಳಕೆಗೆ ಸಜ್ಜಾಗಬೇಕಾಗಿದೆ’ ಎಂದು ಕೃಷ್ಣಮೋಹನ್‌ ಅಭಿಪ್ರಾಯಪಟ್ಟರು.

***

ಎಲ್ಲ ಸಂಶೋಧನೆಗಳಿಗೂ ನಾವು ಪಾಶ್ಚಾತ್ಯರತ್ತ ನೋಡಬಾರದು. ಭಾರತದಲ್ಲೂ ಇದನ್ನು ಸಾಧಿಸಬಹುದು ಎಂಬುದನ್ನು ಕೊವ್ಯಾಕ್ಸಿನ್‌ ಲಸಿಕೆ ಅಭಿವೃದ್ಧಿಪಡಿಸಿದ ಯಶೋಗಾಥೆ ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದೆ

-ಅತಿನ್ ತೋಮರ್, ಸಿಇಒ ಮತ್ತು ಸಹ ಸಂಸ್ಥಾಪಕ ಯಾಪನ್ ಬಯೊಪ್ರೈವೇಟ್ ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.