ADVERTISEMENT

ಮಹದೇಶ್ವರ ರಥೋತ್ಸವ

ತೆಪ್ಪೋತ್ಸವದ ಮೂಲಕ ದೀಪಾವಳಿ ಜಾತ್ರೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:31 IST
Last Updated 8 ನವೆಂಬರ್ 2018, 20:31 IST
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಪ್ರಯುಕ್ತ ನಡೆದ ಮಹಾರಥೋತ್ಸವದ ನೋಟ
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಪ್ರಯುಕ್ತ ನಡೆದ ಮಹಾರಥೋತ್ಸವದ ನೋಟ   

ಮಹದೇಶ್ವರ ಬೆಟ್ಟ: ಇತಿಹಾಸ ಪ್ರಸಿದ್ಧ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಪ್ರಯುಕ್ತ ಮಹದೇಶ್ವರ ಸ್ವಾಮಿಯ ರಥೋತ್ಸವ ಗುರುವಾರ ಬೆಳಿಗ್ಗೆ‌ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಾಲೂರು ಮಠದ ಪೀಠಾಧ್ಯಕ್ಷ ಗುರುಸ್ವಾಮಿ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ರಥೋತ್ಸವ 9.45ಕ್ಕೆ ಮುಕ್ತಾಯಗೊಂಡಿತು.

ಉಪವಾಸ ವ್ರತದಲ್ಲಿದ್ದ ಬೇಡಗಂಪಣ ಸಮುದಾಯದ 108 ಬಾಲಕಿಯರು, ಮುಂಜಾನೆ ನಾಲ್ಕು ಗಂಟೆಗೆ ಮಹದೇಶ್ವರ ಸ್ವಾಮಿಗೆ ಬೆಲ್ಲದ ಆರತಿ ಎತ್ತುವ ಮೂಲಕ ರಥೋತ್ಸವದ ವಿಧಿ ವಿಧಾನಗಳಿಗೆ ಚಾಲನೆ ನೀಡಿದರು. ಬಳಿಕ ವಿಶೇಷ ಪೂಜೆ ನಡೆಯಿತು.

ADVERTISEMENT

ದೇವಾಲಯದ ಒಳಪ್ರಾಂಗಣದಲ್ಲಿ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ನೆರವೇರಿತು. ಆ ನಂತರ ಉತ್ಸವ ಮೂರ್ತಿಗೆ ಗುರುಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿ ಮೂರ್ತಿಯನ್ನು ದೊಡ್ಡ ತೇರಿನಲ್ಲಿ ಪ್ರತಿಷ್ಠಾಪಿಸಿದರು.

ಗೊರವರ ಕುಣಿತ, ವೀರಗಾಸೆ, ತಮಟೆ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಮಂಗಳವಾರ ಆರಂಭಗೊಂಡಿದ್ದ ಜಾತ್ರೆಗೆ ಗುರುವಾರ ರಾತ್ರಿ ನಡೆದ ತೆಪ್ಪೋತ್ಸವದ ಮೂಲಕ ತೆರೆ ಬಿದ್ದಿತು.

ದಾಸೋಹ: ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಮಲೆ ಮಹದೇಶ್ವರಸ್ವಾಮಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ದಾಸೋಹದ ವ್ಯವಸ್ಥೆ ಮಾಡಿತ್ತು. ಕೆಎಸ್‌ಆರ್‌ಟಿಸಿಯು ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಬೆಟ್ಟಕ್ಕೆ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಿತ್ತು. ಜಿಲ್ಲಾಡಳಿತವು ಬೆಟ್ಟದಲ್ಲಿ ಸಂಚಾರ ಆರೋಗ್ಯ ಕೇಂದ್ರಗಳನ್ನು ತೆರೆದಿತ್ತು.

**

ಭಕ್ತರ ದಂಡು

ಮೂರು ದಿನಗಳ ಅವಧಿಯಲ್ಲಿ 2.5 ಲಕ್ಷದಿಂದ 3 ಲಕ್ಷ ಮಂದಿ ಬೆಟ್ಟಕ್ಕೆ ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದಿದ್ದಾರೆ. ಕರ್ನಾಟಕವಲ್ಲದೇ ನೆರೆಯ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ವಿದೇಶದಿಂದಲೂ‌ ಭಕ್ತರು ಬಂದಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ. ಗಾಯತ್ರಿ ಅವರು, ‘ದೀಪಾವಳಿ ಜಾತ್ರಾ ಮಹೋತ್ಸವ ಬಹಳ ಅಚ್ಚುಕಟ್ಟಾಗಿ ನೆರವೇರಿದೆ. ದೇವಾಲಯಕ್ಕೆ ಅಂದಾಜು 2.5 ಲಕ್ಷ ಭಕ್ತರು ಬಂದಿದ್ದಾರೆ. 2.5 ಲಕ್ಷದಿಂದ 3 ಲಕ್ಷಗಳಷ್ಟು ಲಡ್ಡು ಪ್ರಸಾದ ಮಾರಾಟವಾಗಿದೆ. ಚಿನ್ನದ ತೇರಿಗೆ ಸಂಬಂಧಿಸಿದಂತೆಒಂದರಿಂದ ಒಂದೂವರೆ ಸಾವಿರದಷ್ಟು ಟಿಕೆಟ್‌ಗಳು ವಿತರಣೆಯಾಗಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.