ADVERTISEMENT

ನನ್ನ ಬಗ್ಗೆ ಟೀಕಿಸುವುದಕ್ಕೇ ಮೋದಿ ಬಳಿ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 10:28 IST
Last Updated 7 ಮಾರ್ಚ್ 2019, 10:28 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ನನ್ನ ಬಗ್ಗೆ ಟೀಕಿಸುವುದಕ್ಕೇ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏನೂ ಇಲ್ಲ. ಬಾಯಿ ಬಿಟ್ಟರೆ ನನ್ನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತ್ರ ಮಾತನಾಡಲು ಸಾಧ್ಯ. ಹಾಗಾಗಿ, ತಮ್ಮ ರ್‍ಯಾಲಿಯಲ್ಲಿ ಏನನ್ನೂ ಮಾತನಾಡದೇ ಹಾಗೇ ಮರಳಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಖರ್ಗೆ ಬಗ್ಗೆ ಸುಳ್ಳು ಮಾತನಾಡಿದರೆ ಇಲ್ಲಿನ ಜನ ಹೇಗೆ ತಿರುಗೇಟು ಕೊಡುತ್ತಾರೆ ಎಂದು ಪ್ರಧಾನಿಗೆ ಗೊತ್ತಿದೆ. ಖರ್ಗೆ ಹೆಸರು ಕಿವಿಗೆ ಬಿದ್ದಾಕ್ಷಣ ಅಭಿವೃದ್ಧಿಯೇ ಜನರ ಕಣ್ಣು ಮುಂದೆ ಬರುತ್ತದೆ. ಹಾಗಾಗಿ, ಸುಮ್ಮನಿರದೇ ಬೇರೆ ದಾರಿ ಇಲ್ಲ. ಇದು ಕೂಡ ಅವರ ಚುನಾವಣಾ ತಂತ್ರಗಾರಿಕೆಯೇ’ ಎಂದು ಅವರು ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಪ್ರಧಾನಿಯೇ ಕಲಬುರ್ಗಿಗೆ ಬರುತ್ತಿದ್ದಾರೆ, ಕಲ್ಲಿನ ನಾಡನ್ನು ಚಿನ್ನದ ನಾಡು ಮಾಡಿಬಿಡುತ್ತಾರೇನೋ ಎಂದು ನಾನು ಆಸೆಗಣ್ಣಿನಿಂದ ನೋಡುತ್ತಿದ್ದೆ. ಆದರೆ, ಬರಿಗೈಯಲ್ಲಿ ಬಂದು ಹಾಗೇ ಹೋಗಿದ್ದಾರೆ. ಈ ಕರ್ಮಕ್ಕೆ ಇಲ್ಲಿಯವರೆಗೆ ಬರಬೇಕಿತ್ತೇ? ಐದು ವರ್ಷಗಳಲ್ಲಿ ಈ ಜಿಲ್ಲೆಗೆ ಮಾಡಿದ ಒಂದೇ ಒಂದು ಕೆಲಸವನ್ನಾದರೂ ಬಾಯಿ ಬಿಟ್ಟು ಹೇಳಬೇಕಿತ್ತು. ಏಕೆ ಹೇಳಲಿಲ್ಲ?’ ಎಂದು ಪ್ರಶ್ನಿಸಿದರು.

‘ರೈಲ್ವೆ ವಿಭಾಗೀಯ ಕಚೇರಿ, ರಿಂಗ್‌ ರಸ್ತೆ, ವಿಮಾನ ನಿಲ್ದಾಣ, ನಿಮ್ಜ್‌ನಂತ ಹಲವಾರು ಕೆಲಸಗಳು ಪೆಂಡಿಂಗ್‌ ಬಿದ್ದಿವೆ. ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಹಲವಾರು ಕಡತಗಳು ಹಾಗೇ ಬಿದ್ದಿವೆ. ಅದೆಲ್ಲವನ್ನೂ ಬದಿಗಿಟ್ಟು; ಬೆಂಗಳೂರು, ರಾಯಚೂರು ಹಾಗೂ ಹುಬ್ಬಳ್ಳಿಗೆ ಮಂಜೂರಾದ ಕಾಮಗಾರಿಗಳಿಗೆ ಕಲಬುರ್ಗಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲಿಗೇ ಹೋಗದೇ ಇಲ್ಲಿ ಏಕೆ ಬಂದಿದ್ದೀರಿ?’ ಎಂದೂ ಪ್ರಶ್ನಿಸಿದರು.

ಸಮಾಜ ಕಲ್ಯಾಣ ಸಚಿವ ಪ್ರಯಾಂಕ್‌ ಖರ್ಗೆ ಮಾತನಾಡಿ, ‘ಚುನಾವಣೆ ಹತ್ತಿರ ಬರುತ್ತಿದ್ದಂತೆ ‘ತ್ರಿಮೂರ್ತಿ’ಗಳು ಹುಟ್ಟಿಕೊಂಡು ಬಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಇವರು ತ್ರಿಮೂರ್ತಿಗಳಲ್ಲ, ಉದ್ಭವ ಮೂರ್ತಿಗಳು. ಚುನಾವಣೆ ಮುಗಿದ ಬಳಿಕ ಇವರೆಲ್ಲ ಪತನಾಗುತ್ತಾರೆ’ ಎಂದು ಡಾ.ಉಮೇಶ ಜಾಧವ, ಮಾಲೀಕಯ್ಯ ಗುತ್ತೇದಾರ ಹಾಗೂ ಬಾಬುರಾವ ಚಿಂಚನಸೂರ್‌ ಅವರ ವಿರುದ್ಧ ವಾಗ್ದಾಳಿ ಮಾಡಿದರು.

‘ನನಗೆ ಕೊನೆಯ ಚುನಾವಣೆ ಅಲ್ಲ’
ಕಲಬುರ್ಗಿ:
‘ನನಗೆ ವಯಸ್ಸಾಗಿದೆ. ಇದೇ ಕೊನೆಯ ಚುನಾವಣೆ ಎಂದು ಬಹಳ ಜನ ಮಾತನಾಡುತ್ತಿದ್ದಾರೆ. ಆದರೆ, ನಾನು ಹುಟ್ಟು ಹೋರಾಟಗಾರ. ನನಗಿದು ಕೊನೆಯ ಚುನಾವಣೆ ಅಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

‘ನನ್ನನ್ನು ಸೋಲಿಸಲು ಮೋದಿ ಅವರಂಥ ಬಹಳ ಜನ ಕುತಂತ್ರ ನಡೆಸಿದ್ದಾರೆ. ಆದರೆ, ನನ್ನನ್ನು ಸೋಲಿಸುವುದು ಅಥವಾ ಗೆಲ್ಲಿಸುವುದು ಈ ಕ್ಷೇತ್ರದ ಜನರ ಕೈಲಿದೆ ಹೊರತು; ಮೋದಿ ಕೈಲಿ ಇಲ್ಲ. ಇಂಥ ನೂರು ಮಂದಿ ಬಂದರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಅವರು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.