ADVERTISEMENT

ಬಣ್ಣದ ಜೆರಾಕ್ಸ್‌ ನೋಟು ನೀಡಿ ಕುರಿಗಾಹಿಗೆ ಮೋಸ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:52 IST
Last Updated 27 ಜನವರಿ 2020, 19:52 IST
ಮೋಸ ಹೋದ ಕುರಿಗಾಹಿ ಮಂಚಯ್ಯ
ಮೋಸ ಹೋದ ಕುರಿಗಾಹಿ ಮಂಚಯ್ಯ   

ಮದ್ದೂರು(ಮಂಡ್ಯ): ಸಮೀಪದ ಕೆಸ್ತೂರು ವ್ಯಾಪ್ತಿಯ ಅಂಕನಾಥ‍ಪುರ ಗ್ರಾಮದ ಬಳಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಯೊಬ್ಬರಿಂದ ಭಾನುವಾರ ಕುರಿಯೊಂದನ್ನು ಖರೀದಿಸಿದ ಅಪರಿಚಿತರು, ಅವರಿಗೆ ಬಣ್ಣದ ಜೆರಾಕ್ಸ್‌ ಮಾಡಿಸಿದ ನೋಟುಗಳನ್ನು ನೀಡಿ ವಂಚಿಸಿದ್ದಾರೆ.

ಕುರಿಗಾಹಿ ಮಂಚಯ್ಯ (65), ಗ್ರಾಮದ ರಸ್ತೆ ಬದಿಯ ಹೊಲದಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಆಟೊದಲ್ಲಿ ಬಂದ ನಾಲ್ವರು ಕುರಿ ಖರೀದಿಗೆ ಮುಂದಾಗಿ, ಬೆಲೆ ವಿಚಾರಿಸಿದ್ದಾರೆ. ಒಂದು ಕುರಿಗೆ ₹ 6 ಸಾವಿರ ಎಂದು ಮಂಚಯ್ಯ ಹೇಳಿದ್ದಾರೆ.

ಚೌಕಾಸಿಗೆ ಮುಂದಾದ ಖದೀಮರು ₹ 5 ಸಾವಿರಕ್ಕೆ ವ್ಯಾಪಾರ ಮುಗಿಸಿ, ₹ 500 ಮುಖಬೆಲೆಯ 10 ಬಣ್ಣದ ಜೆರಾಕ್ಸ್‌ ನೋಟುಗಳನ್ನು ನೀಡಿ ಕುರಿಯನ್ನು ಆಟೊದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.

ADVERTISEMENT

ಗ್ರಾಮಕ್ಕೆ ಮರಳಿದ ಮಂಚಯ್ಯ, ಅನುಮಾನಗೊಂಡು ನೋಟುಗಳನ್ನು ಗ್ರಾಮಸ್ಥರಿಗೆ ತೋರಿಸಿದ್ದಾರೆ. ಅವೆಲ್ಲವೂ ‍‍ಒಂದೇ ಕ್ರಮ ಸಂಖ್ಯೆಯುಳ್ಳ ಜೆರಾಕ್ಸ್ ನೋಟುಗಳು ಎಂದು ಗ್ರಾಮಸ್ಥರು ಹೇಳಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಅವರು ಕೆಸ್ತೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.