ADVERTISEMENT

ಅನುಮತಿ ನಿರಾಕರಿಸಿದ ಮಂಡ್ಯ: ಬೆಳಗಾವಿ ಗೋಮಾಳದಲ್ಲಿ ಟೆಕ್ಕಿ ಸೌಮ್ಯ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 11 ಮೇ 2020, 13:41 IST
Last Updated 11 ಮೇ 2020, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾನುವಾರ ತಡರಾತ್ರಿ ನೆರವೇರಿದೆ.

ಪುಣೆಯಲ್ಲಿ ಟೆಕಿಯಾಗಿ ಕೆಲಸ ಮಾಡುತ್ತಿದ್ದಮದ್ದೂರು ತಾಲ್ಲೂಕು ತೈಲೂರು ನಿವಾಸಿ ಟಿ.ಎ. ಸೌಮ್ಯಾ (38) ಭಾನುವಾರ ಹೃದಯಾಘಾತದಿಂದನಿಧನರಾಗಿದ್ದರು. ಪತಿ ಶರತ್ ಪತ್ನಿಯ ಮೃತ ದೇಹ ಊರಿಗೆ ತರಲು ಮಂಡ್ಯ ಜಿಲ್ಲಾಡಳಿತದಿಂದ ಅನುಮತಿ ಕೇಳಿದ್ದರು. ಆದರೆ, ಸೌಮ್ಯಾ ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂಶರತ್ ಅವರು ಸೌಮ್ಯಮೃತದೇಹವನ್ನು ಪುಣೆಯಿಂದ ಕರ್ನಾಟಕ ಗಡಿವರೆಗೆ ಭಾನುವಾರ ತಂದಿದ್ದರು.

ಪುತ್ರಿ ಯುಕ್ತಾ ಹಾಗೂ ತಂದೆ, ನಿವೃತ್ತ ಪಿಎಸ್‍ಐ ಅಪ್ಪಯ್ಯ ಜೊತೆ ರಾಜ್ಯ ಪ್ರವೇಶಕ್ಕೆ ಅನುಮತಿಗಾಗಿ ಕಾದಿದ್ದರು. ಮಾಹಿತಿ ತಿಳಿದ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರ ಮನವೊಲಿಸಿ ಕೊಗನೋಳಿ ಸಮೀಪದ ದೂಧ್‌ಗಂಗಾ ನದಿ ದಂಡೆ ಸಮೀಪದ ಗೋಮಾಳದಲ್ಲಿ ಅಂತ್ಯಸಂಸ್ಕಾರ ಮಾಡಿಸಿದ್ದಾರೆ.

ADVERTISEMENT

‘ಆ ಮಹಿಳೆ ಕೋವಿಡ್‌–19ನಿಂದ ಮೃತಪಟ್ಟಿಲ್ಲ. ಕುಟುಂಬದವರ ಒಪ್ಪಿಗೆ ಮೇರೆಗೆ ಗಡಿಯಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಕುಟುಂಬದವರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ. ಇ–ಪಾಸ್‌ಗೆ ಅವರು ಅಪ್ಲೈ ಮಾಡಿದ್ದಾರೆ. ಅನುಮತಿಗಾಗಿ ಗಡಿಯಲ್ಲೇ ಕಾಯುತ್ತಿದ್ದಾರೆ’ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.