ADVERTISEMENT

ಮಂಡ್ಯ: ಜೆಡಿಎಸ್‌ ಜೊತೆ ಹೊಂದಾಣಿಕೆ ಬೇಡ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 18:03 IST
Last Updated 7 ಅಕ್ಟೋಬರ್ 2018, 18:03 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ನಾಗಮಂಗಲ: ‘ಪಕ್ಷ ಮತ್ತು ಕಾರ್ಯಕರ್ತರ ಹಿತದೃಷ್ಟಿಯಿಂದ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿಹೇಳಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಹೀಗಾಗಿ ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.

ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಕಾನೂನು ಇಲ್ಲ. ಅವರು ಕೇಳುತ್ತಾರೆ, ಕೇಳಲಿ. ಆದರೆ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಿನ್ನೆಯಷ್ಟೇ ಚುನಾವಣಾ ದಿನಾಂಕ ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಹಾಕಲ್ಲ ಎಂದು ಎಲ್ಲೂ ಹೇಳಿಲ್ಲ. ಮುಂದೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ಈ ಉಪ ಚುನಾವಣೆಯಲ್ಲಿ ನಾನು ಟಿಕೆಟ್‌ ಆಕಾಂಕ್ಷಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಉಪ ಚುನಾವಣೆಯಲ್ಲಿ ಗೆದ್ದವರು ಮಾರ್ಚ್‌ವರೆಗೆ ಮಾತ್ರ ಅಧಿಕಾರದಲ್ಲಿ ಇರುತ್ತಾರೆ. ಹೀಗಾಗಿ ಚುನಾವಣಾ ಆಯೋಗ ನೈಸರ್ಗಿಕ ನ್ಯಾಯದ ಬಗ್ಗೆ ಯೋಚಿಸಬೇಕಾಗಿತ್ತು. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿ ಇದ್ದಾಗ ಮಾತ್ರ ಉಪ ಚುನಾವಣೆ ನಡೆಯಬೇಕು. ಈ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಆಗ್ರಹಿಸಿದರು.

‘80 ಸ್ಥಾನ ಗೆದ್ದ ಕಾಂಗ್ರೆಸ್‌ 36 ಸ್ಥಾನ ಗೆದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ಈ ಅರಿವು ಜೆಡಿಎಸ್ ಮುಖಂಡರಲ್ಲಿ ಇದ್ದಂತೆ ಕಾಣುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.