ADVERTISEMENT

ಆದಿತ್ಯ ರಾವ್‌ ಕೊಠಡಿಯಲ್ಲಿದ್ದ ವಸ್ತುಗಳು ವಶಕ್ಕೆ

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:34 IST
Last Updated 29 ಜನವರಿ 2020, 9:34 IST

ಮಂಗಳೂರು: ಇದೇ 20ರಂದು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಆದಿತ್ಯ ರಾವ್‌ನ ಬಾಡಿಗೆ ಕೊಠಡಿ, ಆತ ಕೆಲವು ವಸ್ತುಗಳನ್ನು ಖರೀದಿಸಿದ್ದ ಹಾರ್ಡ್‌ವೇರ್‌ ಅಂಗಡಿ ಮತ್ತು ಮತ್ತೊಂದು ಲಾಕರ್‌ ಹೊಂದಿದ್ದ ಬ್ಯಾಂಕ್‌ನಲ್ಲಿ ಪೊಲೀಸರು ಮಂಗಳವಾರ ಸ್ಥಳ ತನಿಖೆ ನಡೆಸಿದರು.

ಆರೋಪಿಯು ಬೆಂದೂರ್‌ನ ಬೆಥನಿ ಕಾನ್ವೆಂಟ್‌ ಹಿಂಭಾಗದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ನೆಲೆಸಿದ್ದ. ಅಲ್ಲಿಗೆ ಆತನನ್ನು ಕರೆದೊಯ್ದ ಎಸಿಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ, ತೀವ್ರ ಶೋಧ ನಡೆಸಿತು. ಕೊಠಡಿಯಲ್ಲಿ ಕೆಲವು ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಫೋಟಕ ತಯಾರಿಸಲು ಕದ್ರಿ ದ್ವಾರದ ಬಳಿಯ ಹಾರ್ಡ್‌ವೇರ್‌ ಅಂಗಡಿಯೊಂದರಲ್ಲಿ ಕೆಲವು ವಸ್ತುಗಳನ್ನು ಖರೀದಿಸಿರುವುದಾಗಿ ಆದಿತ್ಯ ರಾವ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಆ ಅಂಗಡಿಗೂ ಆರೋಪಿಯನ್ನು ಕರೆದೊಯ್ದ ಪೊಲೀಸರು, ಸ್ಥಳ ಮಹಜರು ನಡೆಸಿದರು. ಅಂಗಡಿ ಮಾಲೀಕರು ಮತ್ತು ನೌಕರರ ಹೇಳಿಕೆ ದಾಖಲಿಸಿಕೊಂಡರು.

ADVERTISEMENT

ಮತ್ತೊಂದು ಲಾಕರ್‌ ತಪಾಸಣೆ:ಕರ್ಣಾಟಕ ಬ್ಯಾಂಕ್‌ನ ಕದ್ರಿ ಶಾಖೆಯಲ್ಲಿ ಆರೋಪಿ ಇನ್ನೊಂದು ಲಾಕರ್‌ ಹೊಂದಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಅಲ್ಲಿಗೂ ಆತನನ್ನು ಕರೆದೊಯ್ದ ತನಿಖಾ ತಂಡ, ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ಲಾಕರ್‌ ತೆರೆಯಿತು. ಅದರಲ್ಲಿದ್ದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.