ADVERTISEMENT

ಮಂಗಳೂರು ಗಲಭೆ ಪ್ರಕರಣ: 21 ಮಂದಿಗೆ ಹೈಕೋರ್ಟ್‌ ಜಾಮೀನು

ಪೊಲೀಸರ ನಡೆ ಕುರಿತು ಸಂಶಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 21:39 IST
Last Updated 19 ಫೆಬ್ರುವರಿ 2020, 21:39 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು:ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ 2019ರ ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಗಲಭೆಗೆ ಕಾರಣವಾದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ 21 ಜನರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಆಶಿಕ್, ಮಹಮ್ಮದ್ ಸುಹಾಲ್ ಸೇರಿದಂತೆ 21 ಮಂದಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು, ಅರ್ಜಿದಾರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

ಆರೋಪಿಗಳು ತಲಾ ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು ಹಾಗೂ ಅಷ್ಟೇ ಮೊತ್ತದ ಇಬ್ಬರ ಭದ್ರತಾ ಖಾತರಿ ಒದಗಿಸಬೇಕೆಂಬ ಷರತ್ತು ಸಹಿತ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

ADVERTISEMENT

ಅರ್ಜಿದಾರರ ವಿರುದ್ಧ ನೇರ ಸಾಕ್ಷ್ಯವಿಲ್ಲ: ಮಂಗಳೂರಿನಲ್ಲಿ 2019 ಡಿ.19ರಂದು ಮುಸ್ಲಿಂ ಯುವಕರು ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂಬ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳಿವು ಸಿಕ್ಕಿತ್ತು. ಅದರಿಂದ ಡಿ.18ರಂದು ರಾತ್ರಿ 9ರಿಂದ ಡಿ.20ರ ಮಧ್ಯರಾತ್ರಿಯವರೆಗೆ ಮಂಗಳೂರಿನಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು.

ಮುಸ್ಲಿಂ ಸಮುದಾಯದವರು ಮತ್ತು ಪಿಐಎಫ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದವರು ಎಂಬ ಕಾರಣಕ್ಕೆ ಪ್ರಕರಣದಲ್ಲಿ ಆರೋಪಿಗಳಾಗಿ ಸೇರಿಸಲಾಗಿದೆ. ಅರ್ಜಿದಾರರು ಘಟನೆಯಲ್ಲಿ ಭಾಗವಹಿಸಿರುವುದು ಸಿಸಿಟಿವಿ ದೃಶ್ಯಾವಳಿ ಮತ್ತು ಪೋಟೊಗ
ಳಿಂದ ತಿಳಿದು ಬಂದಿದೆ ಎಂದು ಸರ್ಕಾರಿ ವಕೀಲರು ತಿಳಿಸಿ, ಕೆಲವೊಂದು ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಆದರೆ, ಅರ್ಜಿದಾರರು ಮಾರಾಕಾಸ್ತ್ರಗಳೊಂದಿಗೆ ಸ್ಥಳದಲ್ಲಿದ್ದರು ಎಂಬುದನ್ನು ಸಾಬೀತುಪಡಿಸುವುದಕ್ಕೆ ಪೂರಕ ದಾಖಲೆಗಳನ್ನು ಸರ್ಕಾರಿ ವಕೀಲರು ಒದಗಿಸಿಲ್ಲ.

ತನಿಖಾಧಿಕಾರಿಗಳುಸಂಗ್ರಹಿಸಿರುವ ದಾಖಲೆಗಳಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳಿಗೆ ನಿರ್ದಿಷ್ಟವಾದ ಸಾಕ್ಷ್ಯವಿಲ್ಲ. ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸುವುದೇ ಕೂಟ ಸೇರುವುದರ ಸಾಮಾನ್ಯ ಉದ್ದೇಶ ಹೊರತು ಅದೊಂದು ಅಕ್ರಮ ಕೂಟ ಎಂದು ಹೇಳಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, 1,500ರಿಂದ 2 ಸಾವಿರದವರೆಗೆ ಮುಸ್ಲಿಂ ಯುವಕರು ಅಕ್ರಮ ಕೂಟ ಸೇರಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮತ್ತು ಸಾರ್ವಜನಿಕ ಆಸ್ತಿ ನಷ್ಟ ಮಾಡಲು ಸಂಚು ರೂಪಿಸಿದ್ದರು. ಅವರು ಕೋಲು, ಸೋಡಾ ಬಾಟಲಿ ಮತ್ತು ಕಲ್ಲುಗಳನ್ನು ಕೈಯಲ್ಲಿ ಹಿಡಿದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಕೊರ್ಟ್‌ಗೆ ಒದಗಿಸಿರುವ ಫೋಟೊ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಪ್ರಕಾರ ಒಬ್ಬ ಯುವಕ ಮಾತ್ರ ಬಾಟಲಿ ಹಿಡಿದಿದ್ದಾನೆ.

ಘಟನಾ ಸ್ಥಳದಲ್ಲಿ ಸುತ್ತಮುತ್ತಪೊಲೀಸರು ಕಂಡು ಬಂದಿಲ್ಲ. ಪೊಲೀಸ್ ಠಾಣೆ ಮತ್ತು ಪೊಲೀಸರು ಇರುವುದು ಯಾವೊಂದು ಫೋಟೊದಲ್ಲೂ ಕಾಣಿಸುತ್ತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪೊಲೀಸರ ವಿರುದ್ಧದ ಆರೋಪಗಳು ಮತ್ತು ಸಂತ್ರಸ್ತರು ನೀಡಿದ ದೂರು ಆಧರಿಸಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಫಲವಾಗಿರುವುದರಿಂದ ಪ್ರಕರಣದಲ್ಲಿ ತಪ್ಪಾಗಿ ಆರೋಪಿಗಳನ್ನು ಸಿಲುಕಿಸಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸಾಕ್ಷ್ಯ
ವನ್ನು ತಿರುಚುವ ಮೂಲಕ ಉದ್ದೇಶ ಪೂರ್ವಕವಾಗಿ ಅರ್ಜಿದಾರರ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ.

ಯಾವೊಬ್ಬ ಅರ್ಜಿದಾರರೂ ಅಪರಾಧ ಹಿನ್ನೆಲೆಯುಳ್ಳವರಲ್ಲ. ಅರ್ಜಿದಾರರು ಗಲಭೆಯಲ್ಲಿ ಪಾಲ್ಗೊಂಡಿರುವುದಕ್ಕೆ ನೇರ ಸಾಕ್ಷ್ಯಾಧಾರಗಳು ಇಲ್ಲ. ತನಿಖೆಯು ದುರುದ್ದೇಶ ಪೂರ್ವಕ ಹಾಗೂ ಪಕ್ಷಪಾತದಿಂದ ಕೂಡಿರುವುದು ಕಾಣಿಸುತ್ತದೆ. ಹೀಗಾಗಿ ಜಾಮೀನು ನೀಡುವುದು ಸೂಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಪೊಲೀಸರಿಂದಲೇ ಕಲ್ಲು
ಅರ್ಜಿದಾರರು ಸಲ್ಲಿಸಿರುವ ಪೋಟೊಗಳಲ್ಲಿ ಪೊಲೀಸರೇ ಜನರ ಗುಂಪಿನ ಮೇಲೆ ಕಲ್ಲು ತೂರುತ್ತಿರುವುದು ಕಂಡುಬಂದಿದೆ. ಪೊಲೀಸರ ಗೋಲಿಬಾರ್‌ನಿಂದ ಸಾವನ್ನಪ್ಪಿದವರ ಅಲಂಬಿತರು, ಪೊಲೀಸರ ವಿರುದ್ಧ ನೀಡಿದ ದೂರು ಹಾಗೂ ಹಿಂಬರಹದ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಪೊಲೀಸರ ವರ್ತನೆಯು ಅಪರಾಧ ಕೃತ್ಯವಾಗಿದೆ ಎಂದು ಅದರಿಂದ ತಿಳಿದುಬಂದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ.ಪೊಲೀಸರು ತಮ್ಮ ತಪ್ಪುಗಳನ್ನು ಮುಚ್ಚಿಡುವ ನಿಟ್ಟಿನಲ್ಲಿ ಅಮಾಯಕರನ್ನು ಉದ್ದೇಶಪೂರ್ವಕವಾಗಿಯೇ ಪ್ರಕರಣದಲ್ಲಿ ಸಿಲುಕಿಸಿದಂತೆ ಕಾಣುತ್ತಿದೆ. ಪೊಲೀಸರಿಂದ ಗೋಲಿಬಾರ್‌ನಿಂದ ಸಾವನ್ನಪ್ಪಿದ ವ್ಯಕ್ತಿಗಳ ವಿರುದ್ಧವೇ ಐಪಿಸಿ ಸೆಕ್ಷನ್ 307 (ಕೊಲೆಯತ್ನ) ಆರೋಪದಡಿ ಎಫ್‌ಐಆರ್ ದಾಖಲಿಸಿರುವುದು ಪೊಲೀಸರು ಅತಿರೇಕದ ವರ್ತನೆಗೆ ಸಾಕ್ಷಿಯಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.