ADVERTISEMENT

ಕಾಸರಗೋಡು: ಪುತ್ರಿ ಮೇಲೆಯೇ ಆ್ಯಸಿಡ್ ದಾಳಿ ನಡೆಸಿದ ಅಪ್ಪ

ಪಿಟಿಐ
Published 6 ಸೆಪ್ಟೆಂಬರ್ 2025, 5:11 IST
Last Updated 6 ಸೆಪ್ಟೆಂಬರ್ 2025, 5:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಕಾಸರಗೋಡು: ಬಾಲಕಿಯ ಮೇಲೆ ತಂದೆಯೇ ಆ್ಯಸಿಡ್ ದಾಳಿ ನಡೆಸಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ ಎಂದು ಜಿಲ್ಲಾ ಪೊಲೀಸರು ಶನಿವಾರ ತಿಳಿಸಿದ್ದಾರೆ. ಮತ್ತೊರ್ವ ಬಾಲಕಿಗೂ ಆ್ಯಸಿಡ್ ದಾಳಿಯಿಂದಾಗಿ ಗಾಯಗಳಾಗಿವೆ.

ಘಟನೆ ಸಂಬಂಧ ‍ರಾಜಪುರಂ ಪೊಲೀಸರು ಆರೋಪಿ, ಕರ್ನಾಟಕದ ದಕ್ಷಿಣ ಕನ್ನಡ ನಿವಾಸಿ ಮನೋಜ್ ಕೆ.ಸಿ (48) ಎಂಬಾತನ ಮೇಲೆ ‍ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಶುಕ್ರವಾರ ರಾತ್ರಿ 10.30ರ ವೇಳೆಗೆ ಘಟನೆ ನಡೆದಿದ್ದು, ಪನತ್ತಡಿ ಗ್ರಾಮದ ಪಾರಕಡವು ಎಂಬಲ್ಲಿರುವ ಆರೋಪಿಯ ಹೆಂಡತಿಯ ಸಹೋದರನ ಮನೆಯಲ್ಲಿ ಪ್ರಕರಣ ಘಟಿಸಿದೆ.

ಮನೋಜ್ ಹಾಗೂ ಪತ್ನಿ ನಡುವಿನ ವೈವಾಹಿಕ ಸಂಬಂಧ ಹಳಸಿತ್ತು. ಆಗಾಗ್ಗೆ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಮನೆ ತೊರೆದಿದ್ದ ಪತ್ನಿ, ತನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದರು.

ಶುಕ್ರವಾರ ಮನೋಜ್‌ನ 17 ವರ್ಷದ ಮಗಳು ತನ್ನ 10 ವರ್ಷದ ಸೋದರ ಸಂಬಂಧಿಯೊಂದಿಗೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ರಬ್ಬರ್ ಶೀಟುಗಳ ಸಂಸ್ಕರಣೆಗೆ ತಂದಿದ್ದ ಆ್ಯಸಿಡ್‌ ಅನ್ನು ಬಾಲಕಿಯರ ಮೇಲೆ ಸುರಿದು, ಪಲಾಯನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಿಂದ ಮನೋಜ್‌ನ ಮಗಳ ಕೈ ಹಾಗೂ ತೊಡೆಗೆ ಸುಟ್ಟಗಾಯಗಳಾಗಿವೆ. ಆಕೆಯ ಸೋದರ ಸಂಬಂಧಿಯ ಮುಖ ಹಾಗೂ ಕೈಗಳಲ್ಲಿ ಸುಟ್ಟಗಾಯಗಳಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತ ಬಾಲಕಿಯರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(3) (ಕ್ರಿಮಿನಲ್ ಅತಿಕ್ರಮಣ ಪ್ರವೇಶ), 124(1) (ಆ್ಯಸಿಡ್ ಬಳಸಿ ಗಂಭೀರ ಗಾಯ ಉಂಟುಮಾಡುವುದು), 109(1) (ಕೊಲೆಯತ್ನ), 351(2) (ಕ್ರಿಮಿನಲ್ ಬೆದರಿಕೆ) ಅಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕೇರಳ ಹಾಗೂ ಕರ್ನಾಟಕದಲ್ಲಿ ಆರೋ‍‍ಪಿ ಮನೋಜ್ ಪತ್ತೆಗೆ ಯತ್ನಿಸಲಾಗುತ್ತಿದ್ದು, ಅಗತ್ಯ ಬಿದ್ದರೆ ಕರ್ನಾಟಕ ಪೊಲೀಸರ ಸಹಕಾರ ಕೋರುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.