ADVERTISEMENT

ಮಂಗಳೂರು ಗಲಭೆ ಪ್ರಕರಣ: ನ್ಯಾಯಾಂಗ ತನಿಖೆ ಇಲ್ಲ -ಬೊಮ್ಮಾಯಿ

ಗೃಹ ಸಚಿವರ ಉತ್ತರದಿಂದ ಅತೃಪ್ತಿ, ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 21:19 IST
Last Updated 20 ಫೆಬ್ರುವರಿ 2020, 21:19 IST
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಸರ್ಕಾರದ ಉತ್ತರದಿಂದ ತೃಪ್ತರಾಗದ ವಿಧಾನ ಪರಿಷತ್‌ನ ವಿರೊಧ ಪಕ್ಷದ ಸದಸ್ಯರು ಗುರುವಾರ ಸಭಾತ್ಯಾಗ ನಡೆಸಿದರು –ಪ್ರಜಾವಾಣಿ ಚಿತ್ರ
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಸರ್ಕಾರದ ಉತ್ತರದಿಂದ ತೃಪ್ತರಾಗದ ವಿಧಾನ ಪರಿಷತ್‌ನ ವಿರೊಧ ಪಕ್ಷದ ಸದಸ್ಯರು ಗುರುವಾರ ಸಭಾತ್ಯಾಗ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಂಗಳೂರು ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ, ಸದನ ಸಮಿತಿ ರಚನೆಯೂ ಅಸಾಧ್ಯ, ಹೈಕೋರ್ಟ್ ಏನು ಸೂಚನೆ ನೀಡುತ್ತದೋ ಅದರಂತೆ ನಡೆದುಕೊಳ್ಳಲಾಗುವುದು ಎಂಬ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು ಗುರುವಾರ ವಿಧಾನ ಪರಿಷತ್‌ನಲ್ಲಿ ಸಭಾತ್ಯಾಗ ನಡೆಸಿದರು.

ನಿಲುವಳಿ ಗೊತ್ತುವಳಿ ಮೇಲೆ ನಡೆದ ಸುದೀರ್ಘ ಚರ್ಚೆಯ ಕೊನೆಯಲ್ಲಿ ಬೊಮ್ಮಾಯಿ ಉತ್ತರ ನೀಡಿದರು. ಮಂಗಳೂರಿನಲ್ಲಿ 144 ಸೆಕ್ಷನ್‌ ಹಾಕಿದ್ದರಿಂದಲೇ ಹಿಂಸಾಚಾರ ಸಂಭವಿಸಿತು ಎಂಬ ಕಾಂಗ್ರೆಸ್ ಸದಸ್ಯ ಐವನ್‌ ಡಿಸೋಜ ಅವರು ಪದೇ ಪದೇ ಹೇಳಿ, ಇತರ ಸದಸ್ಯರನ್ನೂ ಪ್ರೇರೇಪಿಸಿದರೂ ಜಗ್ಗದ ಬೊಮ್ಮಾಯಿ ಅವರು ಗಲಭೆ ನಿಯಂತ್ರಿಸಲು ಸರ್ಕಾರ ಕೈಗೊಂಡ ನಿರ್ಧಾರವನ್ನು ಸಮರ್ಥಿಸಿದರು. ಇದರಿಂದ ಅಸಮಾಧಾನಗೊಂಡ ವಿರೋಧ ಪಕ್ಷದ ನಾಯಕ ಎಸ್‌.ಆರ್.ಪಾಟೀಲ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಸದಸ್ಯರು ಸಭಾತ್ಯಾಗ ನಡೆಸಿದರು.

ಸಚಿವರು ಉತ್ತರ ಕೊಟ್ಟು, ಚರ್ಚೆ ಇಲ್ಲಿಗೆ ಮುಗಿಯಿತು ಎಂದು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದ ಮೇಲೂ ಐವನ್‌ ಡಿಸೋಜ, ನಾರಾಯಣ ಸ್ವಾಮಿ, ಅಬ್ದುಲ್‌ ಜಬ್ಬಾರ್‌, ಅಬ್ದುಲ್‌ ನಜೀರ್‌, ಕೆ.ಟಿ.ಶ್ರೀಕಂಠೇಗೌಡ, ಅರವಿಂದ ಕುಮಾರ ಅರಳಿ, ಪ್ರಕಾಶ್ ರಾಠೋಡ್‌, ಎಸ್.ಆರ್.ಪಾಟೀಲ ಅವರು ಇನ್ನಷ್ಟು ಪ್ರಶ್ನೆ ಕೇಳಿದರು. ಸಚಿವರು ಮತ್ತೊಮ್ಮೆ ಉತ್ತರ ನೀಡಿ ಸರ್ಕಾರದ ಅಚಲ ಧೋರಣೆ ಪ್ರದರ್ಶಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.