ADVERTISEMENT

ಸಿಸಿಬಿ ಕಾರ್ಯಾಚರಣೆ: ಗಾಂಜಾ ಹೊಂದಿದ್ದ 12 ವಿದ್ಯಾರ್ಥಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 8:00 IST
Last Updated 9 ಜುಲೈ 2022, 8:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಂಗಳೂರು: ಗಾಂಜಾವನ್ನು ಹೊಂದಿದ್ದ 12 ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳೆಲ್ಲರೂ ಕೇರಳ ರಾಜ್ಯದವರು.

ನಗರದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಈ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ಬಿ.ರಾಜೇಂದ್ರ ನೇತೃತ್ವದ ಪೊಲೀಸರ ತಂಡ ವೆಲೆನ್ಸಿಯಾ ಸೂಟರ್‌ಪೇಟೆ ಮೂರನೇ ಕ್ರಾಸ್ ಅಡ್ಡರಸ್ತೆ ಬಳಿಯ ವಸತಿಗೃಹವೊಂದಕ್ಕೆ ದಾಳಿ ನಡೆಸಿತ್ತು. ದಾಳಿಯ ವೇಳೆ 900 ಗ್ರಾಂ ತೂಕದ ₹ 20 ಸಾವಿರ ಮೌಲ್ಯದ ಗಾಂಜಾ, ಗಾಂಜಾ ಸೇದುವ ಕೊಳವೆ, ರೋಲಿಂಗ್ ಪೇಪರ್‌ಗಳು, ₹ 4,500 ನಗದು ಹಾಗೂ 11 ಮೊಬೈಲ್ ಫೋನ್‌ಗಳನ್ನು, ಡಿಜಿಟಲ್ ತಕ್ಕಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸ್ವತ್ತುಗಳ ಒಟ್ಟು ಮೌಲ್ಯ ₹ 2.85 ಲಕ್ಷ ಎಂದು ಅಂದಾಜಿಸಲಾಗಿದೆ.

ಕೇರಳದ ಕಣ್ಣೂರು ಜಿಲ್ಲೆಯ ಪಯಂಗಡಿ ಗ್ರಾಮದ ಶಾನೂಫ್ ಅಬ್ದುಲ್ ಗಫೂರ್(21), ತಾಯಿಲ್‌ನ ಮೊಹಮ್ಮದ್ ರಸೀನ್ (22), ಪಾಪಿನಾಶೇರಿ ಗ್ರಾಮದ ಅಮಲ್ (21) ಮತ್ತು ಅಭಿಷೇಕ (21), ಆರ್ಲಂ ಗ್ರಾಮದ ಪೆರಂಬಾಶಿಯ ನಿದಾಲ್ (21), ವಾಡಿಕ್ಕಲ್ ಗ್ರಾಮದ ಮಾಡಾವಿಯ ಮೊಹಮ್ಮದ್ ರಿಶಿನ್ (22), ಗುರುವಾಯೂರಿನ ತಮರಾಯೂರಿನ ಗೋಕುಲ ಕೃಷ್ಣನ್ (22), ಕಾಸರಗೋಡು ಜಿಲ್ಲೆಯಹೊಸದುರ್ಗ ತಾಲ್ಲೂಕಿನ ಪೊದಾವುರ್‌ನ ಶಾರೂನ್ ಆನಂದ (19), ಪಣತೂರ್ ಗ್ರಾಮದ ಅನಂತು ಕೆ.ಪಿ (18), ತ್ರಿಕರಿಪುರ ಗ್ರಾಮದ ಶಾಹೀದ್ ಎಂ.ಟಿ.ಪಿ (22), ಎರ್ನಾಕುಳಂ ಜಿಲ್ಲೆಯ ಕಲೂರ್ ಕೊಚ್ಚಿಯ ಫಹಾದ್ ಹಬೀಬ್ (22), ಕೋಯಿಕ್ಕೋಡ್‌ ಜಿಲ್ಲೆಯ ಕಕ್ಕಾಡ್ ಗ್ರಾಮದ ರಿಜಿನ್ ರಿಯಾಜ್‌ (22) ಬಂಧಿತರು.

ADVERTISEMENT

ಬಂಧಿತರಲ್ಲಿ ಆರು ವಿದ್ಯಾರ್ಥಿಗಳು ದಾಳಿ ನಡೆದ ವೆಲೆನ್ಸಿಯಾ ಸೂಟರ್‌ಪೇಟೆ ಮೂರನೇ ಕ್ರಾಸ್ ಅಡ್ಡರಸ್ತೆ ಬಳಿಯ ವಸತಿಗೃಹದಲ್ಲೇ ವಾಸಿಸುತ್ತಿದ್ದರು. ಒಬ್ಬ ವಿದ್ಯಾರ್ಥಿ ಅತ್ತಾವರ ಬಬ್ಬು ಸ್ವಾಮಿ ದೈವಸ್ಥಾನದ ಬಳಿ, ಇನ್ನೊಬ್ಬ ವಿದ್ಯಾರ್ಥಿ ಕೊಡಿಯಾಲ್ ಬೈಲಿನ ಜೈಲು ರಸ್ತೆ ಬಳಿ ವಾಸವಿದ್ದ. ನಾಲ್ವರು ವಿದ್ಯಾರ್ಥಿಗಳು ಕದ್ರಿ, ಶಿವಭಾಗ್ ಎರಡನೇ ಕ್ರಾಸ್ ರಸ್ತೆಯ ಬಳಿ ವಾಸಿಸುತ್ತಿದ್ದರು.

ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, 11 ಮಂದಿ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಆರೋಪಿಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು ಕಾಲೇಜೊಂದರ ಪದವಿ ವಿದ್ಯಾರ್ಥಿಗಳು. ಅವರಲ್ಲಿ 8 ಮಂದಿ ವಿದ್ಯಾರ್ಥಿಗಳು ಅಂತಿಮ ವರ್ಷದ ಬಿಬಿಎ, ಬಿಸಿಎ ಪದವಿ, ಫಾರೆನ್ಸಿಕ್ ಸೈನ್ಸ್ ಪದವಿ ಕಲಿಯುತ್ತಿದ್ದಾರೆ. ಒಬ್ಬ ಪ್ರಥಮ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಮೂವರು ನರ್ಸಿಂಗ್ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿಗಳು. ಒಬ್ಬ ನರ್ಸಿಂಗ್‌ ಪದವಿ, ಇನ್ನೊಬ್ಬ ರೇಡಿಯಾಲಜಿ ಹಾಗೂ ಮತ್ತೊಬ್ಬ ಅಲೈಡ್‌ ಸೈನ್ಸ್‌ ವಿದ್ಯಾರ್ಥಿ. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದುಪೊಲೀಸ್‌ಮೂಲಗಳುತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.