ADVERTISEMENT

ಮಾವು ಬೆಳೆಗೆ ಬೆಂಬಲ ಬೆಲೆ | ಸಂಪುಟ ಸಭೆಯಲ್ಲಿ ನಿರ್ಧಾರ: ಬೈರತಿ ಸುರೇಶ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:47 IST
Last Updated 18 ಜೂನ್ 2025, 15:47 IST
<div class="paragraphs"><p>ಬೈರತಿ ಸುರೇಶ್</p></div>

ಬೈರತಿ ಸುರೇಶ್

   

ಬೆಂಗಳೂರು: ‘ಮಾವು ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಅಂತಿಮ ನಿರ್ಧಾರವನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು’ ಎಂದು ಕೋಲಾರ ಜಿಲ್ಲಾ ಉಸ್ತುವಾರಿಯೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಈ ಬಾರಿ ಮಾವು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.

ADVERTISEMENT

‘ಕೋಲಾರದಲ್ಲಿ ಬೆಳೆಯುತ್ತಿರುವ ತೋತಾಪುರಿ ಸೇರಿದಂತೆ ಇತರ ಮಾವಿನ ಹಣ್ಣುಗಳ ಪ್ರವೇಶವನ್ನು ಆಂಧ್ರಪ್ರದೇಶ ಸರ್ಕಾರ ನಿರ್ಬಂಧಿಸಿರುವುದರಿಂದ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿಗೆ, ಎರಡು ಬಾರಿ ಪತ್ರ ಬರೆದು ಮನವಿ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೊಡುಕೊಳ್ಳುವಿಕೆ ಇರಬೇಕು. ಆದರೆ, ಆಂಧ್ರಪ್ರದೇಶ ನಮ್ಮ ರಾಜ್ಯದ ಹಣ್ಣುಗಳಿಗೆ ನಿರ್ಬಂಧ ಹೇರಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯ ಕೂಡಾ ಆ ರಾಜ್ಯದ ಬೆಳೆಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಕುರಿತು ಗಂಭೀರ ಚಿಂತನೆ ನಡೆಸಲಿದೆ’ ಎಂದರು.

‘ಕೋಲಾರದ ಮಾವು ಬೆಳೆಗಾರರ ಸಂಕಷ್ಟಗಳನ್ನು ಆಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚೆ ನಡೆಸಲಾಗಿದೆ. ಬೆಳೆಗಾರರ ನೆರವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.