ಎಚ್‌ಡಿಕೆ
ಬೆಂಗಳೂರು: ರಾಜ್ಯದ ಮಾವು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದು, ಕನಿಷ್ಠ ಬೆಂಬಲ ಬೆಲೆ ನೀಡಿ, ರೈತರಿಂದ ಮಾವು ಖರೀದಿಸಿ ನೆರವಾಗುವಂತೆ ಕೋರಿದ್ದಾರೆ.
ಕರ್ನಾಟಕದಲ್ಲಿ ಮಾವು ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಅಂದಾಜು 8-10 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಮತ್ತು ರೋಗಗಳಿಂದಾಗಿ ಈ ವರ್ಷ ಇಳುವರಿ ಶೇ 30ಕ್ಕಿಂತ ಕಡಿಮೆಯಾಗಿದೆ ಎಂದು ರೈತರು ಹೇಳಿದ್ದಾರೆ.
ಈ ವರ್ಷದ ಮೇ ಮತ್ತು ಜೂನ್ ನಡುವೆ, ಮಾವಿನಹಣ್ಣಿನ ಬೆಲೆಯಲ್ಲಿ ತೀವ್ರ ಏರಿಳಿತವಾಗಿದೆ. ಕ್ವಿಂಟಲ್‌ಗೆ ₹2,12,000 ರಿಂದ ಕ್ವಿಂಟಲ್‌ಗೆ ₹23,000ಕ್ಕೆ ಇಳಿದಿದೆ. ಆದರೆ ಕೃಷಿಯ ಸರಾಸರಿ ವೆಚ್ಚವು ಕ್ವಿಂಟಲ್‌ಗೆ ₹85,466 ರಷ್ಟಿದೆ. ಈ ತೀವ್ರ ಕುಸಿತವು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಾವು ಬೆಳೆ ಬೆಳೆಯಲು ವ್ಯಯಿಸಿದ ಖರ್ಚನ್ನೂ ಮರುಪಡೆಯಲಾಗುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಈ ಸಮಸ್ಯೆಯ ನಡುವೆ ಆಂಧ್ರಪ್ರದೇಶ ಸರ್ಕಾರವು ಕರ್ನಾಟಕದ ಗಡಿಯಲ್ಲಿರುವ ಚಿತ್ತೂರು ಜಿಲ್ಲೆಗೆ ತೋತಾಪುರಿ ಮಾವಿನ ಹಣ್ಣುಗಳ ಪ್ರವೇಶವನ್ನು ನಿಷೇಧಿಸಿದೆ. ಪೂರೈಕೆ ಸರಪಳಿಯಲ್ಲಿನ ಈ ಅಡ್ಡಿಯು ಗಡಿ ಪ್ರದೇಶಗಳಲ್ಲಿನ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ವಿಶೇಷವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉದ್ವಿಗ್ನತೆ ಮತ್ತು ಪ್ರತಿಭಟನೆಗೆ ಕಾರಣವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳು ಆಂಧ್ರಪ್ರದೇಶ ಸರ್ಕಾರವನ್ನು ಈ ನಿಷೇಧವನ್ನು ಆದಷ್ಟು ಬೇಗ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದಿದ್ದಾರೆ.
ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆ ಮತ್ತು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ರಾಜ್ಯದ ಮಾವು ಸಂಗ್ರಹಿಸಲು ಕೇಂದ್ರ ಸರ್ಕಾರವು ನಾಫೆಡ್‌ಗೆ ಸೂಚಿಸಬೇಕೆಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.