ADVERTISEMENT

ಮುಂಗಾರು ಪ್ರವೇಶಕ್ಕೆ ಉತ್ತಮ ಮಳೆಯ ಮುನ್ನುಡಿ

ಮೇ ಕೊನೆ ವಾರ ಭಾರಿ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 18:30 IST
Last Updated 20 ಮೇ 2019, 18:30 IST
   

ಬೆಂಗಳೂರು: ಮುಂಗಾರು ಪ್ರವೇಶಿಸುವುದಕ್ಕೂ ಮೊದಲೇ ರಾಜ್ಯದ ದಕ್ಷಿಣ ಒಳನಾಡಿನಲ್ಲಿಇದೇ 23 ರ ಬಳಿಕ ಸುಮಾರು ಒಂದು ವಾರ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಪ್ರಬಲ ಸುಳಿಗಾಳಿಯಂತಹ ವಾತಾವರಣ ಸೃಷ್ಟಿಯಾಗುವುದರಿಂದ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.

ಇದೇ 23 ಕ್ಕೆ ಆರಂಭಗೊಳ್ಳುವ ಮುಂಗಾರು ಪೂರ್ವ ಮಳೆಯು ಮೇ 29 ರವರೆಗೆ ಮುಂದುವರಿಯಲಿದೆ. ಇದರಿಂದಾಗಿ ರಾಜ್ಯದ ಹಲವೆಡೆ ಉತ್ತಮ ಮಳೆ ಆಗಲಿದೆ. ಪ್ರಬಲ ಸುಳಿಗಾಳಿಯಿಂದ ದಕ್ಷಿಣ ಒಳನಾಡು ಮತ್ತು ನೆರೆಯ ಜಿಲ್ಲೆಗಳಲ್ಲೂ ಪ್ರಭಾವ ಉಂಟಾಗಲಿದೆ. ಅಲ್ಲದೆ,ಹಿಂದೂ ಮಹಾಸಾಗರದಲ್ಲಿ ಸಮುದ್ರಮಟ್ಟದಿಂದ 3.1 ಕಿಲೊಮೀಟರ್‌ ಮೇಲ್ಭಾಗದಲ್ಲಿ ಚಂಡಮಾರುತ ಕೇಂದ್ರೀಕೃತವಾಗಲಿದೆ. ಮುಂಗಾರು ಪ್ರವೇಶಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಜೂನ್‌ 6ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಅದಾದ ಒಂದೆರಡು ದಿನಗಳಲ್ಲೇ ರಾಜ್ಯವನ್ನು ಪ್ರವೇಶಿಸುತ್ತದೆ.

ADVERTISEMENT

ಆದರೆ, ಮಾರ್ಚ್‌ನಿಂದ ಮೇ ವರೆಗೆ ಸುರಿದ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಶೇ 45ರಷ್ಟು ಕಡಿಮೆಯಾಗಿದೆ. ದೇಶದ ಸರಾಸರಿ ಮುಂಗಾರು ಪೂರ್ವ ಮಳೆಯ ಕೊರತೆ ಶೇ 22ರಷ್ಟು. ಮೇ ಮೊದಲ ವಾರ ವಾಡಿಕೆಯಷ್ಟು ಮಳೆ ಆಗದೆಇರುವುದೇ ಕೊರತೆಗೆ ಕಾರಣ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿ: 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ!

ಪ್ರಸಕ್ತ ಬೇಸಿಗೆಯಲ್ಲಿ ಅತಿ ಹೆಚ್ಚಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ಸೋಮವಾರ ನಗರದಲ್ಲಿ ದಾಖಲಾಗಿದ್ದು, ಕೆಂಡದಂತಹ ಬಿಸಿಲಿನಿಂದಾಗಿ ಜನ ಹೊರಗೆ ಬರಲು ಹಿಂಜರಿದರು.

ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆಯೇ ನೆತ್ತಿ ಸುಡುವ ಬಿಸಿಲಿನ ಜೊತೆಗೆ ಬಿಸಿಗಾಳಿಯೂ ಹೈರಾಣ ಮಾಡಿತು. ರಾತ್ರಿ 8ರವರೆಗೂ ಬಿಸಿ ಗಾಳಿ ಬೀಸುತ್ತಲೇ ಇತ್ತು. ಪ್ರಖರ ಬಿಸಿಲು ಹೆಚ್ಚುತ್ತಲೇ ಇರುವುದರಿಂದ ಮಧ್ಯಾಹ್ನದ ಸಮಯದಲ್ಲಿ ಜನ ಸಂಚಾರ ವಿರಳವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.