ADVERTISEMENT

ಹಾರಂಗಿ ಜಲಾಶಯದಲ್ಲಿ ನೀರಿನ ಕೊರತೆ

ಜಲಾನಯನ ಪ್ರದೇಶದಲ್ಲಿ ಸುರಿಯದ ವಾಡಿಕೆ ಮಳೆ

ರಘು ಹೆಬ್ಬಾಲೆ
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಬುಧವಾರ ನೀರಿನ ಸಂಗ್ರಹ ಪ್ರಮಾಣದ ಕೊರತೆಯಿಂದ ಭಣಗುಡುತ್ತಿದೆ.
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಬುಧವಾರ ನೀರಿನ ಸಂಗ್ರಹ ಪ್ರಮಾಣದ ಕೊರತೆಯಿಂದ ಭಣಗುಡುತ್ತಿದೆ.   

ಕುಶಾಲನಗರ: ಕಳೆದ ವರ್ಷ ಜಲಪ್ರಳಯವನ್ನೇ ಸೃಷ್ಟಿಸಿದ್ದ ಮಳೆರಾಯ ಈ ಬಾರಿ ಜೂನ್ ಮೂರನೇ ವಾರ ಅಂತ್ಯದಲ್ಲಿಯೂ ಕೂಡ ವಾಡಿಕೆ ಮಳೆ ಆಗಿಲ್ಲ. ಕಾವೇರಿ ಕಣಿವೆ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕೊಡಗಿನ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಭಾರಿ ಕೊರತೆ ಇರುವುದರಿಂದ ಭಣಗುಡುತ್ತಿದೆ.

ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯುತ್ತಿಲ್ಲ. ಜಿಲ್ಲೆಯ ವಿವಿಧೆಡೆ ಕೆಲಕಾಲ ಜೋರಾಗಿ ಸುರಿಯುವ ಮಳೆ ನಂತರ ನಿಂತು ಹೋಗುತ್ತಿದೆ. ಹೀಗಾಗಿ ಜೂನ್‌ನಲ್ಲಿಯೂ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣವಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಜೋಳ, ಶುಂಠಿ, ರಾಗಿ, ತಂಬಾಕು ಹಾಗೂ ತಗ್ಗು ಪ್ರದೇಶದಲ್ಲಿ ಭತ್ತ ಮತ್ತಿತರ ಬೀಜಗಳನ್ನು ಬಿತ್ತಿರುವ ರೈತರು ಮಳೆ ಬರುತ್ತಿಲ್ಲ ಎಂದು ಚಿಂತೆಗೊಳಗಾಗಿದ್ದಾರೆ. ಒಂದೆಡೆ ಮಳೆಯಿಲ್ಲ, ಮತ್ತೊಂದೆಡೆ ಜಲಾಶಯದಲ್ಲಿ ನೀರಿಲ್ಲ ಎಂಬ ಆತಂಕ ಕೂಡಾ ಆಗಿದೆ.

ಪ್ರತಿವರ್ಷ ಜುಲೈ ಎರಡನೇ ವಾರದಲ್ಲಿ ಜಲಾಶಯ ಬಹುತೇಕ ಭರ್ತಿಯಾಗುತ್ತಿತ್ತು. ಜಲಾಶಯ ತುಂಬಿದ ನಂತರ ಕಾಲುವೆಗೂ ಕೂಡ ನೀರು ಹರಿಸುತ್ತಿದ್ದರು. ಆದರೆ, 8.5 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಇದೀಗ ಕೇವಲ 1.5 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹವಿದೆ. ಇದರಲ್ಲಿ 0.81 ಟಿಎಂಸಿ ಪ್ರಮಾಣದ ನೀರನ್ನು ಮಾತ್ರ ಬಳಸಬಹುದಾಗಿದೆ.

ADVERTISEMENT

ಕಳೆದ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 2,831.50 ಅಡಿ ನೀರು ಸಂಗ್ರಹಗೊಂಡಿತ್ತು. 3.41 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. 968 ಕ್ಯುಸೆಕ್‌ ಒಳಹರಿವು ಇತ್ತು. ಬಹುತೇಕ ಭರ್ತಿಯಾಗಿದ್ದ ಜಲಾಶಯದಿಂದ ಜುಲೈ 23ರಂದು ನದಿಗೆ ನೀರು ಹರಿಬಿಡಲಾಗಿತ್ತು ಎಂದು ಹಾರಂಗಿ ನೀರಾವರಿ ಇಲಾಖೆ ಅಣೆಕಟ್ಟೆ ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.