ಕರ್ನಾಟಕ ಬಂದ್
ಬೆಂಗಳೂರು: ಕನ್ನಡಿಗರ ಮೇಲೆ ಮರಾಠಿ ಭಾಷಿಕರ ದೌರ್ಜನ್ಯ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಖಂಡಿಸಿ, ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬಂದ್ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.
ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ‘ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಸಲಾಗುವುದು. ಮಾರ್ಚ್ 3ರಂದು ಕನ್ನಡ ಒಕ್ಕೂಟದಿಂದ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.
ಬಂದ್ ನಡೆಯುವ ದಿವಸ ಎಲ್ಲ ಜಿಲ್ಲೆಗಳಲ್ಲೂ ಆಟೊ ಹಾಗೂ ಬಸ್‌ಗಳನ್ನು ಚಾಲಕರು ರಸ್ತೆಗೆ ಇಳಿಸಬಾರದು. ಹೋಟೆಲ್ ಮಾಲೀಕರು, ಲಾರಿ ಮಾಲೀಕರ ಸಂಘ, ಸರ್ಕಾರಿ ಹಾಗೂ ಖಾಸಗಿ ಕಂಪನಿ ನೌಕರರು, ಚಾಲಕರ ಸಂಘ, ಸಿನಿಮಾ ರಂಗದವರೂ ಬೆಂಬಲ ಕೊಡಬೇಕು ಎಂದು ಕೋರಿದರು.
ಬಂದ್‌ಗೆ ಆಟೊ ಸಂಘಟನೆಗಳು, ಹೋಟೆಲ್ ಕಾರ್ಮಿಕರ ಸಂಘವು ಆಗಲೇ ಬೆಂಬಲ ಘೋಷಣೆ ಮಾಡಿವೆ.
ಮಾರ್ಚ್ 7ರಂದು ಬೆಳಗಾವಿ ಚಲೊ ನಡೆಸಲಾಗುವುದು. 11ರಂದು ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡುವಂತೆ ಆಗ್ರಹಿಸಿ ಅತ್ತಿಬೆಲೆ–ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. 14ರಂದು ಮೈಸೂರು, ಮಂಡ್ಯ, ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ನಾಗರಾಜ್ ಮಾಹಿತಿ ನೀಡಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧ ಮಾಡಿ, ಶಿವಸೇನೆ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಸಾಂಬಾಜಿ ಪ್ರತಿಮೆ ತೆರವು ಮಾಡಬೇಕು ಎಂದೂ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.