ಕೊಪ್ಪಳ: ಸಮಾಜದಲ್ಲಿಸೌಹಾರ್ದ ಬೆಸೆಯಲು ನಗರದ ಜಮಾತೆ-ಎ- ಇಸ್ಲಾಮಿಯಾ ಹಿಂದ್ಸಂಘಟನೆಯು ಎಲ್ಲ ಧರ್ಮೀಯರಿಗೂ ‘ಮಸೀದಿ ಸಂದರ್ಶನ’ ಮತ್ತು ‘ಪ್ರವಾದಿ ಮಹಮ್ಮದ್ (ಸ) ಎಲ್ಲರಿಗಾಗಿ’ ಎಂಬ ವಿನೂತನ ಕಾರ್ಯಕ್ರಮವನ್ನು ಡಿ.8ರಂದು ಹಮ್ಮಿಕೊಂಡಿದೆ.
ನಗರದ ರೈಲು ನಿಲ್ದಾಣ ರಸ್ತೆಯ ‘ಮಸ್ಜೀದ್-ಎ- ಅಲಾ’ ದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅನ್ಯ ಧರ್ಮೀಯರು ಮಧ್ಯಾಹ್ನದ ‘ಜೋಹರ್’, ಸಂಜೆಯ ‘ಆಸರ್’ ನಮಾಜ್ ವೀಕ್ಷಿಸಬಹುದು. ವಿಶೇಷವೆಂದರೆ ಈ ಮಸೀದಿಯಲ್ಲಿ ಮಹಿಳೆಯರಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ನೇರ ಪ್ರಾರ್ಥನೆ, ಇಸ್ಲಾಂ ಬಗ್ಗೆ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.
ಮಸೀದಿಯಲ್ಲಿ 20 ನಿಮಿಷ ಪ್ರಾರ್ಥನೆ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು, ಉಜು (ಸ್ವಚ್ಛ ಮಾಡಿಕೊಳ್ಳುವುದು), ಪ್ರಾರ್ಥನೆಯ ವಿಧಿ, ವಿಧಾನ ಅರಿಯಬಹುದು. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಎಲ್ಲ ಧರ್ಮೀಯರು ಭೇಟಿ ನೀಡಬಹುದು.
ಮಸೀದಿ ಒಳಭಾಗದ ವೀಕ್ಷಣೆಗೆ ಅವಕಾಶ ಕಲ್ಪಿಸುವ ಮೂಲಕ ಪರಸ್ಪರರ ನಡುವೆ ಇರುವ ಅಪನಂಬಿಕೆ ದೂರ ಮಾಡುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮಕ್ಕೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡುವರು.
ಇಸ್ಲಾಂ ಧರ್ಮ ಕುರಿತು ತಿಳಿವಳಿಕೆ ಹೆಚ್ಚಿಸಲು ಮಕ್ಕಳಿಗಾಗಿ‘ಎಲ್ಲರಿಗಾಗಿ ಮಹಮ್ಮದ್’ ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
‘ಪ್ರಸ್ತುತದಲ್ಲಿ ಸಮಾಜ ಒಡೆಯುವ ಮನಸ್ಸುಗಳು ಹೆಚ್ಚಾಗಿವೆ. ಪರಸ್ಪರರನ್ನು ಅರಿಯಲು, ಸೌಹಾರ್ದ ಸಮಾಜ ಕಟ್ಟಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ಅಧ್ಯಕ್ಷ ಸುಕೂರ್ ಸಾಬ್ ಹೇಳಿದರು.
‘ಸಮಾನಮನಸ್ಕ ಪ್ರಗತಿಪರ ಕೆಲ ಗೆಳೆಯರು ಜೊತೆಗೂಡಿ ಇಂಥಕಾರ್ಯಕ್ರಮವನ್ನು ಮಸೀದಿಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದೇವೆ. ಎಲ್ಲ ಮಸೀದಿಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂಬುವುದು ನಮ್ಮ ಒತ್ತಾಸೆ’ ಎಂದು ತಿಳಿಸಿದರು.
ಇಳಕಲ್‌ನ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಅವರು ಬಹಿರಂಗಸಭೆಯ ಅಧ್ಯಕ್ಷತೆ ವಹಿಸಿ, ‘ಸೌಹಾರ್ದ’ ಕುರಿತು ಉಪನ್ಯಾಸ ನೀಡುವರು. ಶಾಂತಿ ಪ್ರಕಾಶನದ ಮಹಮ್ಮದ್ ಕುಂಞ ಪಾಲ್ಗೊಳ್ಳುವರು.
***
ಪರಸ್ಪರರು ಅಪನಂಬಿಕೆಯಿಂದ ಹೊರಬಂದು ಸೌಹಾರ್ದದಿಂದ ಬಾಳಬೇಕು. ಈ ಹಿನ್ನೆಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
– ಎಂ.ಎ.ಸುಕೂರ್ ಸಾಬ್, ಅಧ್ಯಕ್ಷ, ಜಮಾತೆ-ಎ-ಇಸ್ಲಾಮಿಯಾ ಹಿಂದ್ ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.