ADVERTISEMENT

ಮಸ್ಕಿ: ‘ಜಿದ್ದಿನಿಂದ’ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 

​ಪ್ರಜಾವಾಣಿ ವಾರ್ತೆ
Published 2 ಮೇ 2021, 10:44 IST
Last Updated 2 ಮೇ 2021, 10:44 IST
ಬಸನಗೌಡ ತುರ್ವಿಹಾಳ
ಬಸನಗೌಡ ತುರ್ವಿಹಾಳ   

ಮಸ್ಕಿ: ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ‘ಅತಿರೇಕ’ ಹಾಗೂ ಕಾಂಗ್ರೆಸ್‌ನ ‘ಸಾಂಘಿಕ ಯತ್ನ’ದ ಜೊತೆಗೆ ಕ್ಷೇತ್ರದಲ್ಲಿಯ ಆಡಳಿತ ವಿರೋಧಿ ಅಲೆ ಹಾಗೂ ಬಸನಗೌಡ ತುರ್ವಿಹಾಳ ಅವರ ಜಿದ್ದಿನ ಹೋರಾಟ ಅವರನ್ನು ಗೆಲುವಿನ ದಡ ಸೇರಿಸಿತು.

ಬಸನಗೌಡ ಮೂಲತಃ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನಿಂದ ಇವರು ಒಂದು ಅವಧಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಆ ನಂತರ ಬಿಜೆಪಿ ಸೇರಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ವಿರುದ್ಧ ಪರಾಭವಗೊಂಡಿದ್ದರು.

ಪ್ರತಾಪಗೌಡ ಪಾಟೀಲ ಅವರು ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಅನುವಾಗಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಕಾಂಗ್ರೆಸ್‌ ಪಕ್ಷ ಬಸನಗೌಡ ತುರ್ವಿಹಾಳ ಅವರನ್ನು ಸೆಳೆದು ಅವರನ್ನು ಕಣಕ್ಕಿಳಿಸಿತ್ತು. ಈ ಉಪ ಚುನಾವಣೆಯಲ್ಲಿ ಎದುರಾಳಿಗಳು ಅವರೇ ಆಗಿದ್ದರೂ ಅವರ ಪಕ್ಷ ಬದಲಾಗಿದ್ದವು.

ADVERTISEMENT

ಜಿದ್ದಿನ ಹೋರಾಟ: 2018ರ ಚುನಾವಣೆಯಲ್ಲಿ ಪ್ರತಾಪಗೌಡ ಅವರ ಪುತ್ರಿ ಅಮೆರಿಕೆಯಲ್ಲಿದ್ದರೂ ಅವರ ಹೆಸರಿನಲ್ಲಿ ಮತ ಚಲಾವಣೆಯಾಗಿದೆ. ಮತದಾನದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ದಾಖಲಿಸಿದರು.

ಬದಲಾದ ರಾಜಕೀಯ ಸ್ಥಿತಿಯಲ್ಲಿ ಪ್ರತಾಪಗೌಡ ಬಿಜೆಪಿ ಸೇರಿದ್ದರಿಂದ ಬಿಜೆಪಿ ಮುಖಂಡರು ಬಸನಗೌಡರಿಗೆ ಟಿಎಲ್‌ಬಿಸಿ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು. ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ವಿಚಾರಣೆಯಲ್ಲಿ ಇದ್ದ ಕಾರಣ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿಲ್ಲ. ಬಿಜೆಪಿ ಮುಖಂಡರು ಬಸನಗೌಡರ ಮನವೊಲಿಸಿ ಚುನಾವಣಾ ತಕರಾರು ಅರ್ಜಿ ವಾಪಸ್‌ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ತಮಗೆ ಟಿಕೆಟ್‌ ಸಿಗುವುದಿಲ್ಲ ಎಂಬುದು ಮನವರಿಕೆಯಾಗುತ್ತಿದ್ದಂತೆ ಬಸನಗೌಡರು ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿದರು.

2018ರ ಚುನಾವಣೆಯಿಂದ ಈ ವರೆಗೆ ನಡೆಸಿದ ಜಿದ್ದಿನ ಹೋರಾಟ ಅವರು ಗೆಲುವಿನ ದಡ ಸೇರುವಂತೆ ಮಾಡಿದೆ.
ಬಸನಗೌಡರಿಗೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರು ದೇಣಿಗೆ ನೀಡಿದ್ದು ಸಹ ಅವರ ನೆರವಿಗೆ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.