ADVERTISEMENT

ವಿದ್ಯಾರ್ಥಿಗಳನ್ನೇ ಬಿಟ್ಟುಹೋದ ಶಿಕ್ಷಕ: ಬಸ್ಸಿಗೆ ಹಣವಿಲ್ಲದೇ 8 ಕಿ.ಮೀ ನಡೆದರು!

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:33 IST
Last Updated 2 ಫೆಬ್ರುವರಿ 2019, 19:33 IST
ಮಕ್ಕಳ ಎದುರಲ್ಲೇ ದೈಹಿಕ ಶಿಕ್ಷಣ ಶಿಕ್ಷಕ ದೀಪಕ ಲೋಕಣ್ಣವರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪಾಲಕರು
ಮಕ್ಕಳ ಎದುರಲ್ಲೇ ದೈಹಿಕ ಶಿಕ್ಷಣ ಶಿಕ್ಷಕ ದೀಪಕ ಲೋಕಣ್ಣವರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪಾಲಕರು   

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕು ಮಟ್ಟದ ಸೇವಾದಳದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಊಟ ಕೊಡಿಸಲಿಲ್ಲ; ಇತ್ತ ಮನೆಗೆ ಮರಳಿ ಹೋಗಲು ಬಸ್ಸಿಗೆ ಹಣವನ್ನೂ ನೀಡಲಿಲ್ಲ. ಇದರಿಂದ ಮಕ್ಕಳು 8–10 ಕಿ.ಮೀ.ವರೆಗೆ ನಡೆದುಕೊಂಡು ಮನೆ ಸೇರಿದ್ದಾರೆ.

ಪಟ್ಟಣದಿಂದ 14 ಕಿ.ಮೀ ದೂರದ ಕಾತೂರ ಗ್ರಾಮದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಭಾರತ ಸೇವಾದಳ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಲ್ಲಿಗೆಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನ (ಪ್ರೌಢಶಾಲೆ ವಿಭಾಗ) ಎಂಟುಮತ್ತು ಒಂಬತ್ತನೇತರಗತಿಯ 14 ಮಕ್ಕಳನ್ನು ದೈಹಿಕ ಶಿಕ್ಷಣ ಶಿಕ್ಷಕ ದೀಪಕ್‌ ಲೋಕಣ್ಣವರ ಕರೆದುಕೊಂಡು ಹೋಗಿದ್ದರು.

ADVERTISEMENT

ಆದರೆ, ಮಧ್ಯಾಹ್ನದ ವೇಳೆಗೆ ಮಕ್ಕಳಿಗೆ ತಿಳಿಸದೇ ಅವರು ಮುಂಡಗೋಡಕ್ಕೆ ವಾಪಸ್‌ ಬಂದಿದ್ದಾರೆ. ಮಕ್ಕಳಊಟದ ಚೀಟಿಗಳನ್ನು ಸಹ ತಮ್ಮ ಹತ್ತಿರವೇ ಇಟ್ಟುಕೊಂಡಿದ್ದರು. ಇತ್ತ, ಮಕ್ಕಳು ಮಧ್ಯಾಹ್ನ ಊಟಕ್ಕೆಂದು ಸಾಲಿನಲ್ಲಿ ನಿಂತಾಗ ಅವರ ಬಳಿ ಊಟದ ಚೀಟಿ ಇರಲಿಲ್ಲ. ಕೂಪನ್‌ ಇಲ್ಲ ಎಂಬ ಕಾರಣಕ್ಕಾಗಿ ಅಲ್ಲಿದ್ದವರು ತಮಗೆ ಊಟ ನೀಡಲಿಲ್ಲ ಎಂದು ಮಕ್ಕಳು ದೂರಿದ್ದಾರೆ.

ಸಂಜೆನಾಲ್ಕುಗಂಟೆಯಾದರೂ ಶಿಕ್ಷಕ ಬಾರದ ಕಾರಣ ಆತಂಕಗೊಂಡ ಮಕ್ಕಳು, ಬಸ್ಸಿಗೆ ಹಣವಿಲ್ಲದೇ ನಡೆದುಕೊಂಡು ಮುಂಡಗೋಡದತ್ತ ಹೊರಟಿದ್ದಾರೆ. 8–10 ಕಿ.ಮೀ ಕ್ರಮಿಸಿದ ನಂತರ ಗ್ರಾಮಸ್ಥರೊಬ್ಬರು ಮಕ್ಕಳನ್ನು ಮಾತನಾಡಿಸಿ ಬಸ್ಸಿನಲ್ಲಿ ಹೋಗುವಂತೆ ಹಣ ನೀಡಿ ಕಳುಹಿಸಿದ್ದಾರೆ.ರಸ್ತೆ ಮಧ್ಯದಲ್ಲಿ ಕೆಲವರು ಸುಸ್ತಾಗಿ ತೊಂದರೆ ಅನುಭವಿಸಿದರು ಎಂದು ದೂರುತ್ತ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದರು.

ವಿಷಯ ತಿಳಿದ ಪಾಲಕರು ಶನಿವಾರ ಜೂನಿಯರ್‌ ಕಾಲೇಜಿಗೆ ಭೇಟಿ ನೀಡಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಶಿಕ್ಷಕ ತೊಂದರೆ ನೀಡಿದ್ದಾರೆ. ಕೆಲವು ಮಕ್ಕಳು ದಾರಿ ಮಧ್ಯದಲ್ಲಿ ಆಯಾಸದಿಂದ ಬಳಲಿದ್ದಾರೆ. ಸೇವಾದಳದ ಬಗ್ಗೆ ಸರಿಯಾಗಿ ಕಲಿಸದೇ ಬೇಜವಾಬ್ದಾರಿ ತೋರಿದ್ದಾರೆ’ ಎಂದು ಪಾಲಕರಾದ ಮರ್ದಾನಸಾಬ, ಪುಟ್ಟವ್ವ ಹಾಗೂ ಮಂಜುಳಾ ಆಚಾರಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಿಕ್ಷಕ ದೀಪಕ್‌ ಲೋಕಣ್ಣವರ, ಪಾಲಕರಲ್ಲಿ ಕ್ಷಮೆ ಯಾಚಿಸಿದರು.

‘ಘಟನೆಯ ಬಗ್ಗೆ ಶಿಕ್ಷಕನಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು. ಡಿಡಿಪಿಐ ಅವರಿಗೆ ವರದಿ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಇಒ ಡಿ.ಎಂ.ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.