ಕೃಷಿ ಮತ್ತು ಕೈಗಾರಿಕೆ ಇವೆರಡೂ ಒಂದೇ ರಥದ ಎರಡು ಚಕ್ರಗಳಿದ್ದಂತೆ. ಕೃಷಿ ಮಾತ್ರವೇ ಸಾಕೆಂದಾಗಲಿ ಅಥವಾ ಕೈಗಾರಿಕೆಗಳೇ ಬೇಡ ಎಂದಾಗಲಿ ಹೇಳಲಾಗದು. ಕೈಗಾರಿಕಾ ಉದ್ದೇಶಕ್ಕಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ವಿಷಯ ಈಗ ವಿವಾದಕ್ಕೀಡಾಗಿದೆ. ಕೃಷಿ ಕುಟುಂಬದಿಂದಲೇ ಬಂದಿರುವ ನನಗೂ ರೈತರ ನೋವು ಅರ್ಥವಾಗುತ್ತದೆ. ದೇವನಹಳ್ಳಿಯಲ್ಲಿ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ಸ್ಥಾಪಿಸುವ ಉದ್ದೇಶ ಸರ್ಕಾರದ್ದು. ಇದಕ್ಕೆ ಜಮೀನು ಸ್ವಾಧೀನಕ್ಕೆ 2021ರಲ್ಲೇ ಅಧಿಸೂಚನೆ, 2022ರಲ್ಲೇ ಆದೇಶ ಹೊರಡಿಸಲಾಗಿತ್ತು. ಹೂಡಿಕೆ ಮಾಡುವವರು ತಮ್ಮ ಕಾರ್ಯಾಚರಣೆಗೆ ಸೂಕ್ತವೆನ್ನಿಸುವ ಪ್ರದೇಶದಲ್ಲಿ ಜಾಗ ಕೋರುತ್ತಾರೆ. ನಾವು ಅವರ ಅಹವಾಲುಗಳನ್ನು ಕೂಡ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಿರುದ್ಯೋಗ ಹೆಚ್ಚಾಗುತ್ತದೆ.
ಚನ್ನರಾಯಪಟ್ಟಣ, ಶ್ರೋತ್ರೀಯ ತೆಲ್ಲೋಹಳ್ಳಿ, ಮಟ್ಟಬಾರ್ಲು- ಈ 3 ಗ್ರಾಮಗಳಲ್ಲಿ ನೀರಾವರಿ, ಕೃಷಿ ಹಾಗೂ ಜನವಸತಿ ಇರುವುದನ್ನು ಪರಿಗಣಿಸಿ 495 ಎಕರೆ ಜಮೀನಿನ ಸ್ವಾಧೀನವನ್ನು ಕೈಬಿಟ್ಟು ಜನಧ್ವನಿಗೆ ಸರ್ಕಾರ ಸ್ಪಂದಿಸಿದೆ. ಜೊತೆಗೆ ಇನ್ನು ಮುಂದೆ ಈ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ಯಾವ ಜಮೀನನ್ನೂ ತೆಗೆದುಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ಇಷ್ಟಾದರೂ ‘ದೇವನಹಳ್ಳಿ ಚಲೋ’ ನಡೆದಿದೆ. ಈಗ ನಾವು ಮತ್ತೊಮ್ಮೆ ಜುಲೈ 4ರಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ.
ಇದು ತೀವ್ರ ಸ್ಪರ್ಧೆಯ ಯುಗ. ಇತ್ತೀಚೆಗೆ ಆಂಧ್ರಪ್ರದೇಶದ ಸರ್ಕಾರವು ಕೆಲವು ಕಂಪನಿಗಳಿಗೆ ಕೇವಲ 90 ಪೈಸೆಗೆ ಒಂದು ಎಕರೆಯಂತೆ ಜಮೀನು ಕೊಟ್ಟಿದೆ. ಉಚಿತವಾಗಿ ಕೊಡುವುದಾಗಿಯೂ ಹೇಳಿದೆ. ಡಿಫೆನ್ಸ್ ಕಾರಿಡಾರ್ ಸಲುವಾಗಿ ಗಡಿ ಭಾಗದ ಮಡಕಶಿರಾ ಸಮೀಪ 10 ಸಾವಿರ ಎಕರೆ ಮೀಸಲಿಟ್ಟಿದೆ. ನೆರೆಯ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಸ್ಪರ್ಧೆ ಇದೆ. ಹಾಗೆಯೇ ಫಾಕ್ಸ್‌ಕಾನ್, ಆಕ್ಸೈಡ್ ಇತ್ಯಾದಿ ಪ್ರಮುಖ ಕಂಪನಿಗಳು ತಮ್ಮ ಹೂಡಿಕೆಯನ್ನು ಹೆಚ್ಚಿಸಿ, ವಿಸ್ತರಣೆ ಮಾಡುವ ಉದ್ದೇಶ ಹೊಂದಿವೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಮುನ್ನಡೆಯಬೇಕಾಗಿದೆ.
ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ವೈಜ್ಞಾನಿಕವಾಗಿ ಪರಿಹಾರ ಕೂಡ ನೀಡಲಾಗುತ್ತದೆ. ಪ್ರತೀ ಒಂದು ಎಕರೆಗೆ 10,771 ಚದರ ಅಡಿ ಅಭಿವೃದ್ಧಿಪಡಿಸಿದ ಜಾಗ ಕೊಡಲು ಅವಕಾಶ ಕಲ್ಪಿಸುವ ನೀತಿಯೂ ನಮ್ಮಲ್ಲಿದೆ. ಸಂತ್ರಸ್ತ ರೈತರು ಇದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಈ ಅಭಿವೃದ್ಧಿಗೊಳಿಸಿದ ಜಾಗವನ್ನು ಅವರು ವಾಣಿಜ್ಯೋದ್ದೇಶಕ್ಕೆ ಬಳಸಿಕೊಳ್ಳಬಹುದು. ಹೀಗಾಗಿ ನನ್ನದೊಂದು ಮನವಿ. ಎಲ್ಲ ರೈತ ಮುಖಂಡರು ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಂಡು, ಚಳವಳಿ ಕೈಬಿಡಬೇಕೆಂದು ಮನವಿ ಮಾಡುತ್ತೇನೆ.
ಲೇಖಕ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.