ADVERTISEMENT

ಮೇಕೆದಾಟು: ಅನುಷ್ಠಾನಕ್ಕೆ ಸರ್ಕಾರ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 20:16 IST
Last Updated 27 ನವೆಂಬರ್ 2018, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬಿದ್ದರೆ ತಮಿಳುನಾಡಿಗೆ ಸಾರಾಸಗಟಾಗಿ ಹರಿದುಹೋಗುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಂಡು, ಕುಡಿಯುವ ಉದ್ದೇಶಕ್ಕೆ ಬಳಸುವ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮೊದಲ ಹಂತದ ಪ್ರಕ್ರಿಯೆ ನಡೆಸಿದೆ.

ರಾಜ್ಯ ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿದ್ದ ಸಾಧ್ಯತಾ ವರದಿಯಲ್ಲಿ 66 ಟಿಎಂಸಿ ಅಡಿ ನೀರು ಸಂಗ್ರಹಿಸಲು ಸಾಧ್ಯವೆಂದು ಹೇಳಲಾಗಿದೆ. ಆದರೆ, ಇಷ್ಟು ನೀರು ಸಂಗ್ರಹವಾಗಬೇಕಾದರೆ 4,500 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ. ಹೀಗಾಗಿ, ಪರಿಸರ ಮತ್ತು ಅರಣ್ಯ ಸಚಿವಾಲಯ ಒಪ್ಪುವುದು ಕಷ್ಟ ಎಂಬ ಲೆಕ್ಕಾಚಾರವೂ ನಡೆದಿತ್ತು.

ಇದರಿಂದಾಗಿ ಸಮಗ್ರ ಯೋಜನಾ ವರದಿ ತಯಾರಿಸುವಾಗ ಅರಣ್ಯ ಪ್ರದೇಶ ಮುಳುಗಡೆಯಾಗುವುದನ್ನು ಕಡಿಮೆ ಮಾಡುವ ಯತ್ನ ನಡೆದಿದೆ. ಒಂದೇ ಅಣೆಕಟ್ಟು ನಿರ್ಮಿಸುವ ಬದಲು 20 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ 2 ಅಥವಾ ಮೂರು ಅಣೆಕಟ್ಟುಗಳನ್ನು ನಿರ್ಮಿಸುವ ಪ್ರಸ್ತಾವ ಇದೆ.

ADVERTISEMENT

ಯೋಜನೆ ಹಿನ್ನೆಲೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013ರಲ್ಲಿ ಮೇಕೆದಾಟು ಯೋಜನೆ ಜಾರಿಗೆ ರೂಪು ರೇಷೆ ಸಿದ್ಧಪಡಿಸಿತ್ತು. ಅಂದು ಜಲ
ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಇದಕ್ಕೆ ಆಸಕ್ತಿ ತೋರಿದ್ದರು. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಹಾಗೂ ಜಲ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.

ಏತನ್ಮಧ್ಯೆ, ರಾಜ್ಯದ ನಡೆ ವಿರೋಧಿಸಿದ್ದ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಕೇಂದ್ರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ಅನುಮತಿ ಸಿಕ್ಕರೆ ಯೋಜನೆ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಅವರು ಯೋಜನೆ ಅನುಷ್ಠಾನದ ಅಗತ್ಯತೆಯನ್ನು ಅವರಿಗೆ
ಮನವರಿಕೆ ಮಾಡಿದ್ದರು.

ಕರ್ನಾಟಕದ ಪ್ರತಿಪಾದನೆ

* ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನ ಅನುಸಾರ ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ನೀರು ಹರಿಸಬೇಕು. ವಾಡಿಕೆಯಷ್ಟು ಮಳೆಯಾದಲ್ಲಿ 80 ಟಿಎಂಸಿ ಅಡಿಯಿಂದ 90 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಸೇರುತ್ತಿದೆ. ಈ ನೀರನ್ನು ಸಂಗ್ರಹಿಸಿ ಬಳಸಲು ಮೇಕೆದಾಟು ಯೋಜನೆ.

* ನ್ಯಾಯಮಂಡಳಿ ಹಂಚಿಕೆ ಮಾಡಿದ ಕರ್ನಾಟಕದ ಪಾಲನ್ನಷ್ಟೇ ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ತಮಿಳುನಾಡು ಆಕ್ಷೇಪಕ್ಕೆ ಅರ್ಥವೇ ಇಲ್ಲ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಉಸ್ತುವಾರಿಯು ಜಲ ಆಯೋಗದ ಅಡಿಯಲ್ಲಿಯೇ ಬರುವುದರಿಂದ ಯೋಜನೆ ಅನುಷ್ಠಾನ ಮಾಡಬಹುದು.

* ಕುಡಿಯುವ ನೀರಿನ ಯೋಜನೆಗೆ ಪ್ರಥಮ ಆದ್ಯತೆ ಎಂದು ಅಂತರ ರಾಷ್ಟ್ರೀಯ ಜಲನೀತಿ ಹೇಳಿದೆ. ಇದು ಕುಡಿಯುವ ನೀರಿನ ಏಕೈಕ ಉದ್ದೇಶದ ಯೋಜನೆ. ಹೀಗಾಗಿ ತಮಿಳುನಾಡು ತಕರಾರು ಮಾಡಬಾರದು.

ತಮಿಳುನಾಡು ಹೇಳುವುದೇನು

* ನ್ಯಾಯಮಂಡಳಿಯಲ್ಲಿ ಕಾವೇರಿ ನೀರಿನ ಹಂಚಿಕೆ ಬಗ್ಗೆ ವಾದ–ವಿವಾದ ನಡೆಯುವಾಗ ಈ ಯೋಜನೆಯನ್ನು ಕರ್ನಾಟಕ ಪ್ರಸ್ತಾಪಿಸಿರಲಿಲ್ಲ. ಅಂತಿಮ ತೀರ್ಪು ನೀಡಿದ ಬಳಿಕ ಹೊಸ ಯೋಜನೆ ಸೇರ್ಪಡೆ ಮಾಡಲು ಬರುವುದಿಲ್ಲ.

* ಕರ್ನಾಟಕದ ಪಾಲಿಗೆ ಹಂಚಿಕೆಯಾಗಿರುವ 270 ಟಿಎಂಸಿ ಅಡಿ ನೀರನ್ನು ಬಿಟ್ಟು, ಹೆಚ್ಚುವರಿ ನೀರು ಬಳಸುವ ಕುರಿತು ತೀರ್ಪಿನಲ್ಲಿ ಪ್ರಸ್ತಾಪವಿಲ್ಲ.

* ಕಾವೇರಿ ನದಿ ನೀರಿನ ಹಂಚಿಕೆ, ಪ್ರಾಧಿಕಾರ ರಚನೆ ಕುರಿತ ವಿವಾದ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಇತ್ಯರ್ಥವಾಗುವ ಮುನ್ನ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಕೂಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.