ADVERTISEMENT

ಮೇಕೆದಾಟು | ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಡಿಕೆಶಿ ಕಾಲೆಳೆದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 7:16 IST
Last Updated 9 ಜನವರಿ 2022, 7:16 IST
ಡಿ.ಕೆ. ಶಿವಕುಮಾರ್ (ಚಿತ್ರ ಕೃಪೆ: Twitter @DKShivakumar)
ಡಿ.ಕೆ. ಶಿವಕುಮಾರ್ (ಚಿತ್ರ ಕೃಪೆ: Twitter @DKShivakumar)   

ರಾಮನಗರ: ಮೇಕೆದಾಟು ಯೋಜನೆಯ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಭಾನುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಗಮದಲ್ಲಿ ಚಾಲನೆ ನೀಡುವ ಸಂದರ್ಭದಲ್ಲಿ ಎಡವಿದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೇ ಅಸ್ತ್ರವಾಗಿಸಿರುವ ಬಿಜೆಪಿ, 'ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ' ಎಂದು ವ್ಯಂಗ್ಯವಾಡಿದೆ. ಈ ಕುರಿತು ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಸಂಗಮದಲ್ಲಿ ಸ್ನಾನ ಮುಗಿಸಿ ಪೂಜೆ ಮಾಡಲು ಕುಳಿತುಕೊಳ್ಳುವಾಗ ಶಿವಕುಮಾರ್ ಎಡವಿದರು.

ADVERTISEMENT

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. 'ಅಧಿಕಾರವಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೀದಿನಾಟಕ ಮಾಡುತ್ತಿದೆ. ಅಧಿಕಾರವಿದ್ದಾಗ ಇಲ್ಲದ ಇಚ್ಛಾಶಕ್ತಿ, ಚುನಾವಣೆಗಾಗಿ ಬಂದಿರುವ ಹಠಾತ್ ರಾಜಕೀಯ ಆಸಕ್ತಿ ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡುವ ನೈಜ ಬದ್ಧತೆ ಇರುವುದು ಬಿಜೆಪಿಗೆ ಮಾತ್ರ' ಎಂದು ಹೇಳಿದ್ದಾರೆ.

ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮುದ್ರಕ್ಕೆ ಹರಿದು ಹೋಗುವ ಕಾವೇರಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಬೆಂಗಳೂರಿನ ಕುಡಿಯುವ ನೀರು, ವಿದ್ಯುತ್, ಕೃಷಿ, ನೀರಾವರಿ ಸೇರಿದಂತೆ ಮೇಕೆದಾಟು ಯೋಜನೆ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಎಂದು ಕಾಂಗ್ರೆಸ್ ಬಣ್ಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.