ADVERTISEMENT

ಕುತೂಹಲ ಘಟ್ಟದಲ್ಲಿ ಪಾದಯಾತ್ರೆ: ಕನಕಪುರ ತಾಲ್ಲೂಕಿನ ಸಂಗಮ ಬಳಿ ಇಂದು ಚಾಲನೆ

ಆರ್.ಜಿತೇಂದ್ರ
Published 8 ಜನವರಿ 2022, 20:00 IST
Last Updated 8 ಜನವರಿ 2022, 20:00 IST
ಸಂಗಮದ ಕಾವೇರಿ ನದಿ ದಂಡೆಯಲ್ಲಿ ಪಾದಯಾತ್ರೆಯ ಮುಖ್ಯ ವೇದಿಕೆ ನಿರ್ಮಾಣ ಕಾರ್ಯ ಶನಿವಾರ ನಡೆದಿತ್ತು –ಪ್ರಜಾವಾಣಿ ಚಿತ್ರ/ಚಂದ್ರೇಗೌಡ
ಸಂಗಮದ ಕಾವೇರಿ ನದಿ ದಂಡೆಯಲ್ಲಿ ಪಾದಯಾತ್ರೆಯ ಮುಖ್ಯ ವೇದಿಕೆ ನಿರ್ಮಾಣ ಕಾರ್ಯ ಶನಿವಾರ ನಡೆದಿತ್ತು –ಪ್ರಜಾವಾಣಿ ಚಿತ್ರ/ಚಂದ್ರೇಗೌಡ   

ಸಂಗಮ (ರಾಮನಗರ): ದಕ್ಷಿಣ ಭಾರತೀಯರ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿಯ ತಟದಲ್ಲಿ ಭಾನುವಾರ ಮುಂಜಾನೆ ಮೇಕೆದಾಟು ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್‌ ತುದಿಗಾಲಲ್ಲಿ ನಿಂತಿದೆ. ಪಾದಯಾತ್ರೆಗೆ ತಡೆಯೊಡ್ಡಲು ರಾಜ್ಯ ಸರ್ಕಾರವೂ ಪ್ರತಿತಂತ್ರ ರೂಪಿಸತೊಡಗಿದ್ದು, ‘ನೀರಿಗಾಗಿ ನಡಿಗೆ’ ಸೋಮವಾರಕ್ಕೂ ಮುಂದುವರಿಯುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

ಬಂಡೆಗಳ ನಾಡು ಕನಕಪುರದಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ನಾಯಕರೆಲ್ಲ ಒಗ್ಗಟ್ಟಾಗಿ ಪಾದಯಾತ್ರೆಯ ರಣಕಹಳೆ ಊದಿದರು. ‘ಜೈಲಿಗೆ ಕಳುಹಿಸಿದರೂ ಸಿದ್ಧ. ಎಲ್ಲಿ ನಮ್ಮನ್ನು ಬಂಧಿಸಿ ಬಿಡುಗಡೆ ಮಾಡುತ್ತೀರೋ ಅಲ್ಲಿಂದಲೇ ಮತ್ತೆ ನಡೆಯುತ್ತೇವೆ’ ಎಂದು ಗುಡುಗಿದರು.

ಮೇಕೆದಾಟು ಪಾದಯಾತ್ರೆ ಘೋಷಣೆಯಾದ ದಿನದಿಂದ ಈವರೆಗೂ ಈ ವಿಚಾರಕ್ಕೆ ಗದ್ದಲ ನಡೆಯುತ್ತಲೇ ಇದ್ದು, ಭಾನುವಾರ ಇದಕ್ಕೊಂದು ಕ್ಲೈಮ್ಯಾಕ್ಸ್‌ ದೊರಕುವ ನಿರೀಕ್ಷೆ ಇದೆ.

ADVERTISEMENT

ಅತ್ಯುತ್ಸಾಹದಲ್ಲಿ ಕಾಂಗ್ರೆಸ್‌: ಕಾವೇರಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದ ಸೌಂದರ್ಯ ಮರೆಮಾಚುವಂತೆ ನಾನಾ ನಮೂನೆಯ ಬಾವುಟಗಳು ಈಗಾಗಲೇ ಹಾರಾಡತೊಡಗಿವೆ. ಇದರ ಜೊತೆಗೆ ಇಡೀ ಪಾದಯಾತ್ರೆ ಸಾಗುವ ಮಾರ್ಗದ ತುಂಬೆಲ್ಲ ಕಾಂಗ್ರೆಸ್‌ ನಾಯಕರ ಭಾವಚಿತ್ರ ಹೊತ್ತ ಫ್ಲೆಕ್ಸ್‌ಗಳು ತೂಗುತ್ತಿವೆ. ಶಿವರಾಜಕುಮಾರ್ ಸೇರಿದಂತೆ ಚಿತ್ರರಂಗದ ಮಂದಿಗೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಆಹ್ವಾನಿಸಿದೆ.

ಕಾಂಗ್ರೆಸ್‌ ತಂತ್ರ: ಕೋವಿಡ್‌ ನಿಯಮ ಪಾಲಿಸಿಕೊಂಡು ಪಾದಯಾತ್ರೆ ಆರಂಭಿಸುವುದು. ಒಂದೊಮ್ಮೆ ರಾಜ್ಯ ಸರ್ಕಾರ ಇದಕ್ಕೆ ಅಡ್ಡಿಪಡಿಸಿ ಪ್ರಮುಖ ನಾಯಕರನ್ನು ಬಂಧಿಸಿ ಕರೆದೊಯ್ದಲ್ಲಿ ಉಳಿದ ಮುಖಂಡರನೇತೃತ್ವದಲ್ಲಿ ಕಾರ್ಯಕರ್ತರೇ ನಡಿಗೆ ಮುಂದುವರಿಸುವುದು ಎಂಬ ನಿರ್ಧಾರಕ್ಕೆ ಪಕ್ಷ ಬಂದಿದೆ.

ಮೊದಲ ದಿನ ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್‌ ಸದಸ್ಯರ ಜೊತೆಗೆ ಜಿಲ್ಲೆಯ ಕಾರ್ಯಕರ್ತರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಪ್ರತಿ ನೂರು ಮಂದಿಗೆ ಒಂದು ತಂಡದಂತೆ ಪರಸ್ಪರ ಅಂತರ ಕಾಯ್ದುಕೊಂಡು ನಡೆಯುವ ತೀರ್ಮಾನಕ್ಕೆ ಬರಲಾಗಿದೆ.

ಸರ್ಕಾರ ಪ್ರತಿತಂತ್ರ: ರಾಜ್ಯ ಸರ್ಕಾರವು ಪಾದಯಾತ್ರೆ ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರ ಮೇಲೆ ನಾನಾ ತಂತ್ರ ಪ್ರಯೋಗಿಸತೊಡಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಮ್ಮೊಡನೆ ಮಾತನಾಡಿದ್ದಾಗಿ ಡಿ.ಕೆ.
ಶಿವಕುಮಾರ್ ಹೇಳಿದ್ದಾರೆ. ಜಿಲ್ಲಾಡಳಿತವು ನೋಟಿಸ್ ನೀಡಿದ್ದು, ಕರ್ಫ್ಯೂ ಆದೇಶಮೀರಿ ಪಾದಯಾತ್ರೆ ನಡೆಸಿದಲ್ಲಿ ಕಾನೂನುಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.

ಶನಿವಾರ ಮಧ್ಯಾಹ್ನ ಸಂಗಮದಲ್ಲಿ, ಶಿವಕುಮಾರ್‌ ಅವರು ಕಾರ್ಯಕ್ರಮದ ವೇದಿಕೆ ಸಿದ್ಧತೆ ಪರಿಶೀಲಿಸುವ ವೇಳೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್. ಗಿರೀಶ್‌ ಸ್ಥಳಕ್ಕೆ ಬಂದಿದ್ದು, ಅಲ್ಲಿನ ಹೋಟೆಲ್‌ನ ಕೊಠಡಿಯೊಂದರಲ್ಲಿ ಇಬ್ಬರೂ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.

‘ಜಿಲ್ಲಾಡಳಿತ ಈಗಾಗಲೇ ನಿಮಗೆ ನೋಟಿಸ್‌ ನೀಡಿದೆ. ಕರ್ಫ್ಯೂ ಇರುವ ಕಾರಣ ಪಾದಯಾತ್ರೆ ಕೈಬಿಡಿ’ ಎಂದು ಗಿರೀಶ್‌ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಡಿಕೆಶಿ, ‘ನೀರಿಗಾಗಿ ಪಾದಯಾತ್ರೆ ನಡೆಸುವುದು ನಮ್ಮ ಹಕ್ಕು. ಇದಕ್ಕೆ ಅಡ್ಡಿಪಡಿಸುವ ಅಧಿಕಾರ ನಿಮ್ಮ ಜಿಲ್ಲಾಧಿಕಾರಿಗೂ ಇಲ್ಲ. ನೀವು ಏನು ಕ್ರಮ ಕೈಗೊಳ್ಳುತ್ತೀರೋ ಮಾಡಿ. ಎಲ್ಲದ್ದಕ್ಕೂ ಸಿದ್ಧರಿದ್ದೇವೆ’ ಎಂಬ ಸಂದೇಶ ನೀಡಿ ಕಳುಹಿಸಿದರು.

ಪರಿಣಾಮ ಬೀರದ ನಿಷೇಧಾಜ್ಞೆ: ಪಾದಯಾತ್ರೆ ಆರಂಭ ಆಗಲಿರುವ ಸಂಗಮ ಪ್ರದೇಶದಲ್ಲಿ ಜಿಲ್ಲಾಡಳಿತವು ಶನಿವಾರದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ, ಮೊದಲ ದಿನ ಕನಿಷ್ಠ ಪೊಲೀಸ್ ಭದ್ರತೆಯೂ ಈ ಪ್ರದೇಶದಲ್ಲಿ ಇರಲಿಲ್ಲ. ಎಲ್ಲಿಯೂ ಚೆಕ್‌ ಪೋಸ್ಟ್‌ ಹಾಕಿರಲಿಲ್ಲ. ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ನೀಡಿತ್ತು. ನೂರಾರು ವಾಹನ ಓಡಾಡಿದರೂ ಪೊಲೀಸರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಇದು ಅನುಮಾನಗಳಿಗೆ ಕಾರಣವಾಗಿದೆ.

ಭಾರಿ ಭದ್ರತೆ: ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮಗಳಿಗೂ ಸನ್ನದ್ಧವಾಗಿದ್ದು, ಅದಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ಆಯಾಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿದೆ. ರಾಮನಗರ ಎಸ್‌.ಪಿ ಗಿರೀಶ್ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಎಸ್‌.ಪಿಗಳು ಪಾದಯಾತ್ರೆ ಭದ್ರತೆಯ ನೇತೃತ್ವ ವಹಿಸಲಿದ್ದಾರೆ. 7 ಕೆಎಸ್ಆರ್‌ಪಿ, ಎಂಟುಡಿಎಆರ್ ತುಕಡಿಗಳು, ಎರಡು‌ ಕೆಂಪೇಗೌಡ ಪಡೆ, 6 ಡಿವೈಎಸ್‌ಪಿ, 24 ಇನ್‌‌ಸ್ಪೆಕ್ಟರ್, 60 ಸಬ್ ಇನ್‌ಸ್ಪೆಕ್ಟರ್, 180 ಎಎಸ್ಐ, 1,200 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಕನಕಪುರದಲ್ಲೇ ವಾಸ್ತವ್ಯ:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ನಾಯಕರೆಲ್ಲರೂ ಶನಿವಾರ ರಾತ್ರಿ ಕನಕಪುರದಲ್ಲಿಯೇ ವಾಸ್ತವ್ಯ ಹೂಡಿದ್ದು, ಭಾನುವಾರ ಬೆಳಿಗ್ಗೆ 9ಕ್ಕೆ ಆರಂಭ ಆಗಲಿರುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.

ಅವರಿಗಾಗಿ ಸಂಗಮದಲ್ಲಿ ಇರುವ ಕೆಎಸ್‌ಟಿಡಿಸಿ ಹೋಟೆಲ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇನ್ನಿತರ ಕೆಲವು ನಾಯಕರೂ ಇವರೊಟ್ಟಿಗೆ ತಂಗಲಿದ್ದಾರೆ. ಜೊತೆಗೆ ಕನಕಪುರ ಪ್ರಮುಖ ಹೋಟೆಲ್‌ಗಳಲ್ಲಿ ಕಾಂಗ್ರೆಸ್‌ ಮುಖಂಡರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಂದಿರ, ಮಸೀದಿ ಸುತ್ತಿದ ಡಿಕೆಶಿ:

ಮೇಕೆದಾಟು ಪಾದಯಾತ್ರೆ ಯಶಸ್ಸಿಗೆ ಪ್ರಾರ್ಥಿಸಿ ಡಿ.ಕೆ. ಶಿವಕುಮಾರ್‌ ಶನಿವಾರ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಪ್ರದಕ್ಷಿಣೆ ಹಾಕಿದರು.

ಮೊದಲಿಗೆ ಮನೆದೇವರಾದ ಕೆಂಕೇರಮ್ಮನಿಗೆ ಪೂಜೆ ಸಲ್ಲಿಸಿದರು. ನಂತರ ಕರ್ಫ್ಯೂ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಕಬ್ಬಾಳಮ್ಮ ದೇಗುಲವನ್ನು ಡಿಕೆಶಿ ಅವರಿಗಾಗಿ ತೆರೆಯಲಾಯಿತು. ಬಳಿಕ ಅವರು ಕನಕಪುರ ಜಾಮಿಯಾ ಮಸೀದಿ ಹಾಗೂ ಕುಪ್ಪೇದೊಡ್ಡಿಯ ಸೇಂಟ್‌ ತೆರೇಸಾ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಶಾಸಕರೊಂದಿಗೆ ಸಭೆ:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಶನಿವಾರ ಸಂಜೆ ಕನಕಪುರದಲ್ಲಿ ಇರುವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಿತು.‌ ಪಾದಯಾತ್ರೆ ನಡೆಯಲಿರುವ ರೀತಿ, ಒಂದು ವೇಳೆ ಸರ್ಕಾರ ಅಡ್ಡಿಪಡಿಸಿದಲ್ಲಿ ಮುಂದೆ ಕೈಗೊಳ್ಳಬಹುದಾದ ಪರ್ಯಾಯ ಮಾರ್ಗಗಳ‌ ಕುರಿತು ಚರ್ಚೆ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿ.‌ ಪರಮೇಶ್ವರ, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ ಸೇರಿದಂತೆ ಕಾಂಗ್ರೆಸ್ ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮ್ಮದ್‌, ರಾಮಲಿಂಗಾರೆಡ್ಡಿ, ಆರ್‌. ಧ್ರುವನಾರಾಯಣ, ಸಂಸದ ಡಿ.ಕೆ. ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.