ADVERTISEMENT

ಮೇಕೆದಾಟು ಯೋಜನೆ: ಡಿಎಂಕೆ ನಡೆಗೆ ಎಎಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 14:24 IST
Last Updated 21 ಮಾರ್ಚ್ 2024, 14:24 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಬೆಂಗಳೂರು: ಇಂಡಿಯಾ ಒಕ್ಕೂಟದ ಮಿತ್ರಪಕ್ಷ ಡಿಎಂಕೆ ರಾಜ್ಯದ ಆಶಯಕ್ಕೆ ವಿರುದ್ಧವಾಗಿ ಮೇಕೆದಾಟು ಯೋಜನೆಗೆ ತೊಡಕು ಮಾಡುತ್ತಿರುವುದು ದುರದೃಷ್ಟಕರ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಂದ ಇಂತಹ ನಡೆ ನಿರೀಕ್ಷಿಸಿರಲಿಲ್ಲ. ಮೇಕೆದಾಟು ಪ್ರಯೋಜನಗಳ ಕುರಿತು ‘ಇಂಡಿಯಾ’ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆಗೆ ಕಾಂಗ್ರೆಸ್‌ ಮನವರಿಕೆ ಮಾಡಿಕೊಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಮೇಕೆದಾಟು ನಿರ್ಮಾಣ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಸಮುದ್ರ ಪಾಲಾಗುವ 65-66 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಸಂಗ್ರಹಿಸುವುದು ರಾಜ್ಯದ ಉದ್ದೇಶ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಉತ್ಪಾದನೆಗೂ ಈ ಯೋಜನೆಯಿಂದ ಅನುಕೂಲವಾಗಲಿದೆ. ಇಂತಹ ಜನಪರ ಯೋಜನೆಗೆ ರಾಜಕೀಯ ಕಾರಣಗಳಿಗಾಗಿ ಅಡ್ಡಗಾಲು ಹಾಕುವುದು ಸಲ್ಲದು ಎಂದಿದ್ದಾರೆ.

ADVERTISEMENT

ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ. ಇಂತಹ ಸಮಯದಲ್ಲಿ ಮಿತ್ರ ಪಕ್ಷ ಡಿಎಂಕೆ ನಡೆ ಖಂಡನೀಯ. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ಪ್ರವಾಹ ಮತ್ತು ಸಂಕಷ್ಟದ ವರ್ಷಗಳಲ್ಲಿ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. 

‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯ ತೊಡಕು ನಿವಾರಣೆಯಾಗಲಿದೆ. ಅದಕ್ಕಾಗಿ ದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ತರಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.