
ಬಸವರಾಜ ಬೊಮ್ಮಾಯಿ
ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಕೇಂದ್ರದೊಂದಿಗೆ ರಾಜಕೀಯ ಪ್ರತಿಷ್ಠೆ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದ ಜತೆ ವಿಶ್ವಾಸ ಇಟ್ಟುಕೊಂಡು ಅನುಮತಿ ಪಡೆದರೆ ಮುಂದಿನ ಕಾನೂನು ಹೋರಾಟದಲ್ಲಿ ಅನುಕೂಲವಾಗುತ್ತದೆ. ಸೌಹಾರ್ದವಾಗಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
‘ಮೇಕೆದಾಟು ಯೋಜನೆ ರಾಜ್ಯದ ಜನರ ಬಹು ವರ್ಷಗಳ ಕನಸು. 1996ರಲ್ಲಿ ವಿದ್ಯುತ್ ಯೋಜನೆಯಿಂದ ಆರಂಭವಾಗಿತ್ತು. ನಾನು ನೀರಾವರಿ ಸಚಿವನಾಗಿದ್ದಾಗ, ಮುಳುಗಡೆ ಪ್ರದೇಶ ಕಡಿಮೆ ಮಾಡಲು ವಿಸ್ತೃತ ಯೋಜನಾ ವರದಿಯಲ್ಲಿ ಬದಲಾವಣೆ ಮಾಡಿದ್ದೆ. ಕಾಂಗ್ರೆಸ್ ಪಾದಯಾತ್ರೆ ಮಾಡದಿದ್ದರೆ ಯೋಜನೆ ಅಂದೇ ಒಂದು ಹಂತಕ್ಕೆ ಬರುತ್ತಿತ್ತು. ಪಾದಯಾತ್ರೆ ಫಲವಾಗಿ ತಮಿಳುನಾಡಿನವರು ನ್ಯಾಯಾಲದ ಮೊರೆ ಹೋದರು. ಈಗ ಬುದ್ಧಿವಂತಿಕೆಯಿಂದ ಎಲ್ಲ ಹಂತಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ತಮಿಳುನಾಡು ಮತ್ತೆ ಕೋರ್ಟ್‌ಗೆ ಹೋಗುತ್ತದೆ. ಮಂಜೂರಾತಿ ನೀಡುವಾಗ ಯಾವ ಹಂತದಲ್ಲಿ ಇತ್ತೋ, ಅದೇ ಹಂತದಿಂದ ಆರಂಭ ಮಾಡುವಂತೆ ಕೇಂದ್ರಕ್ಕೆ ನಾನೂ ಮನವಿ ಮಾಡುತ್ತೇನೆ’ ಎಂದು ಹೇಳಿದರು.
ಮೆಕ್ಕೆಜೋಳ ಖರೀದಿ ಆರಂಭಿಸಬೇಕು:
ರೈತರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಬೆಲೆ ಕುಸಿದಿದ್ದು, ಪ್ರತಿ ಕ್ವಿಂಟಲ್‌ಗೆ ₹1,400ಕ್ಕೆ ಇಳಿದಿದೆ. ಹಾಗಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹2,400 ಕನಿಷ್ಠ ಬೆಂಬಲ ಬೆಲೆ ನೀಡಿದೆ. ರಾಜ್ಯ ಸರ್ಕಾರ ಅದಕ್ಕಿಂತ ಹೆಚ್ಚಿಗೆ ಬೆಲೆಗೆ ಖರೀದಿ ಮಾಡಬೇಕು. ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.