ADVERTISEMENT

ಸದಸ್ಯರ ಆಕ್ಷೇಪ: ಪ್ರಸ್ತಾವ ಹಿಂಪಡೆದ ರೇಸ್‌ ಕ್ಲಬ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 20:15 IST
Last Updated 14 ಫೆಬ್ರುವರಿ 2020, 20:15 IST

ಮೈಸೂರು: ಚುನಾವಣೆ ನಡೆಸದೇ 50 ಮಂದಿಗೆ ಸದಸ್ಯತ್ವ ನೀಡಲು ಮುಂದಾಗಿದ್ದ ಮೈಸೂರು ರೇಸ್‌ ಕ್ಲಬ್‌ (ಎಂಆರ್‌ಸಿ), ಸದ್ಯಕ್ಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕೆಲ ಹಿರಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಈ ತೀರ್ಮಾನಕ್ಕೆ ಬಂದಿದೆ.

ಸಭೆಯಲ್ಲಿ ಮಂಡಿಸಬೇಕಿದ್ದ ಪ್ರಸ್ತಾವಗಳನ್ನು ಹಿಂಪಡೆದಿದ್ದು, ಮತ್ತೆ ಈ ವಿಚಾರ ಕೈಗೆತ್ತಿಕೊಳ್ಳಲು ಶೀಘ್ರದಲ್ಲೇ ಸಭೆ ಕರೆಯುವ ಸಾಧ್ಯತೆ ಇದೆ ಎಂದು ಕ್ಲಬ್‌ ಮೂಲಗಳು ಹೇಳಿವೆ.

‘ಅಸೋಸಿಯೇಷನ್‌ ಆಫ್‌ ದಿ ಕಂಪನಿ’ ನಿಯಮಗಳಿಗೆ ತಿದ್ದುಪಡಿ ತಂದು ಚುನಾವಣೆ ನಡೆಸದೇ, ಸದಸ್ಯರ ಸಂಖ್ಯೆಯನ್ನು 250ರಿಂದ 300 ಕ್ಕೆ ಹೆಚ್ಚಿಸಲು ಕ್ಲಬ್‌ ಮುಂದಾಗಿತ್ತು. ಸದಸ್ಯರ ಸಂಖ್ಯೆ ಹೆಚ್ಚಿಸುವುದಕ್ಕೆ ಇದೊಂದು ಸಲ ಮಾತ್ರ ವ್ಯವಸ್ಥಾಪನಾ ಸಮಿತಿಗೆ ವಿಶೇಷ ಅಧಿಕಾರ ಕಲ್ಪಿಸಲಾಗುವುದು ಎಂದು ಸದಸ್ಯರಿಗೆ ಕಳುಹಿಸಿದ್ದ ನೋಟಿಸ್‌ನಲ್ಲಿ ಕ್ಲಬ್‌ ಹೇಳಿಕೊಂಡಿತ್ತು. ಇದಕ್ಕೆ ಆಗಲೇ ಸುಮಾರು 37 ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದರು.

ADVERTISEMENT

‘ಸಭೆ ಆರಂಭವಾಗುತ್ತಿದ್ದಂತೆಯೇ ತಿದ್ದುಪಡಿ ವಿಚಾರದಲ್ಲಿ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಒತ್ತಡಕ್ಕೆ ಮಣಿದು ನಿರ್ಣಯ ಹಿಂಪಡೆಯಲು ಸಮಿತಿ ತೀರ್ಮಾನಿಸಿತು. ಪ್ರಸ್ತಾವ ಮಂಡಿಸಿದ್ದರೆ ಮತಕ್ಕೆ ಹಾಕುವಂತೆ ಸದಸ್ಯರು ಪಟ್ಟು ಹಿಡಿಯುತ್ತಿದ್ದರು. ಆಗ ಸೋಲು ಉಂಟಾಗಿದ್ದರೆ ಮತ್ತೆ ಪ್ರಸ್ತಾವ ಮಂಡಿಸಲು ಆರು ತಿಂಗಳು ಕಾಯಬೇಕಿತ್ತು. ಹಿಂಪಡೆದಿರುವುದರಿಂದ ಮತ್ತೆ ಯಾವುದೇ ಸಂದರ್ಭದಲ್ಲಿ ಮಂಡಿಸಲು ಅವಕಾಶವಿದೆ’ ಎಂದು ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರವು 30 ವರ್ಷಗಳ ಅವಧಿಗೆ ಭೋಗ್ಯ ನವೀಕರಣ ಮಾಡಿಕೊಟ್ಟ ಬೆನ್ನಲ್ಲೇ, ಸದಸ್ಯರ ಹೆಚ್ಚಳಕ್ಕೆ ಮುಂದಾದ ರೇಸ್‌ ಕ್ಲಬ್‌ ನಿರ್ಧಾರ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದಕ್ಕೆ ಮೈಸೂರು ಭಾಗದ ಕೆಲ ಶಾಸಕರೂ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.