ADVERTISEMENT

6,796 ಸರ್ಕಾರಿ ಶಾಲೆಗಳ ವಿಲೀನ

ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 1,609 ಶಿಫಾರಸು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 23:31 IST
Last Updated 3 ಫೆಬ್ರುವರಿ 2023, 23:31 IST
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ನಾಲ್ಕು ಮತ್ತು ಐದನೇ ವರದಿಯನ್ನು ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್‌ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು. ಸಚಿವ ಗೋವಿಂದ ಕಾರಜೋಳ ಇದ್ದಾರೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ನಾಲ್ಕು ಮತ್ತು ಐದನೇ ವರದಿಯನ್ನು ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್‌ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು. ಸಚಿವ ಗೋವಿಂದ ಕಾರಜೋಳ ಇದ್ದಾರೆ.   

ಬೆಂಗಳೂರು: 3,457 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನ ಹಾಗೂ 3,339 ಶಾಲೆ– ಕಾಲೇಜುಗಳನ್ನು ವಿಲೀನಗೊಳಿಸಿ ಕ್ಲಸ್ಟರ್‌ ಪ್ರೌಢಶಾಲೆ ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಹೀಗೆ ಮಾಡಿದಲ್ಲಿ ಒಟ್ಟು 6,796 ಶಾಲೆ– ಕಾಲೇಜುಗಳು ವಿಲೀನಗೊಳ್ಳಲಿವೆ. 3,457 ಶಾಲೆಗಳನ್ನು 1,667 ಶಾಲೆ ಗಳಲ್ಲಿ ವಿಲೀನಗೊಳಿಸುವಂತೆ ಸಲಹೆ ನೀಡಲಾಗಿದೆ. ಹೀಗಾದಲ್ಲಿ, 3,457 ಶಾಲೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ.

3,339 ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಸಮೀಪದ 1,135 ಶಾಲೆ–ಕಾಲೇಜುಗಳಲ್ಲಿ ವಿಲೀನಗೊಳಿಸಬೇಕು. ಬಳಿಕ, ಅವುಗಳನ್ನು ಸಮೂಹ ಪ್ರೌಢಶಾಲೆ ಅಥವಾ ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಪರಿವರ್ತಿಸಬೇಕು.

ADVERTISEMENT

ಆಡಳಿತ ಸುಧಾರಣೆಗೆ ಸಲಹೆ ನೀಡಲು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯೋಗವು 1,609 ಶಿಫಾರಸುಗಳನ್ನು ಒಳಗೊಂಡ ನಾಲ್ಕು ಮತ್ತು ಐದನೇ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅವರಿಗೆ ಶುಕ್ರವಾರ ಸಲ್ಲಿಸಿತು. ಈ ವರದಿಯಲ್ಲಿ ಶಾಲೆಗಳ ವಿಲೀನ ಹಾಗೂ ಮೇಲ್ದರ್ಜೆಗೆ ಏರಿಸಲು ಸಲಹೆ ನೀಡಲಾಗಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ: ಗ್ರಾಮೀಣ ಕೋಟಾದಲ್ಲಿ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಶೇ 3.45ರಷ್ಟಿದೆ. ಸಿಬಿಎಸ್‌ಇ , ಐಸಿಎಸ್‌ಇ ವಿದ್ಯಾರ್ಥಿಗಳೇ ಕೋಟಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಕೋಟಾವನ್ನು ‘ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿ ಕೋಟಾ’ವಾಗಿ ಪರಿವರ್ತಿಸಬೇಕು. ಇಲ್ಲವೇ ಶೇ 7.5ರಷ್ಟು ಸೀಟುಗಳನ್ನು ಅವರಿಗೆ ಮೀಸಲಿಡಬೇಕು. ಗ್ರಾಮೀಣ ವ್ಯಾಸಂಗ, ಕನ್ನಡ ಮಾಧ್ಯಮ, ಹೈದರಾ ಬಾದ್‌ ಕರ್ನಾಟಕ ಪ್ರಮಾಣ ಪತ್ರಗಳ ಸಿಂಧು ತ್ವವನ್ನು ಜೀವಿತಾವಧಿಗೆ ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಶಾಲೆಯಿಂದ ಹೊರಗುಳಿದ 15ರಿಂದ 18 ವರ್ಷದ ಬಾಲಕಿಯರಿಗೂ ಪ್ರೌಢ ಕಿಶೋರಿಯರ ಯೋಜನೆ ವಿಸ್ತರಿಸಬೇಕು. ಶಾಲೆಗಳಿಗೆ ನೀಡುವ ವಾರ್ಷಿಕ ಅನುದಾನವನ್ನು ದ್ವಿಗುಣಗೊಳಿಸಬೇಕು. ಸಣ್ಣ ಶಾಲೆಗಳಿಗೆ ಕನಿಷ್ಠ ₹ 20 ಸಾವಿರದಿಂದ ₹ 2 ಲಕ್ಷದವರೆಗೆ ನೀಡಬೇಕು ಎಂದು ಹೇಳಲಾಗಿದೆ.

ಅಪೌಷ್ಟಿಕತೆಯಿಂದ ಬಳಲುವ 6 ತಿಂಗಳಿನಿಂದ 3 ವರ್ಷದ ಮಕ್ಕಳಿಗೆ ವಾರಕ್ಕೆ ಐದು ದಿನಗಳು ಮೊಟ್ಟೆ ವಿತರಣೆ ಮಾಡಬೇಕು. ಇತರೆ ಮಕ್ಕಳಿಗೂ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಬೇಕು.

ಕ್ರೀಡಾ ಚಟುವಟಿಕೆಗಳಿಗೆ, ಅಸಂಘಟಿತ ಕಾರ್ಮಿಕರಿಗೆ, ದುರ್ಬಲ ವರ್ಗಗಳ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳಿಂದ ಸೆಸ್‌ ಸಂಗ್ರಹಿಸಬಹುದು. ವಿವಿಧ ಶುಲ್ಕಗಳನ್ನು ಪರಿಷ್ಕರಿಸಬಹುದು. ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮಸೂದೆಯನ್ನು ತ್ವರಿತವಾಗಿ ಅಂತಿಮಗೊಳಿಸಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಹೊರಗಿನ ಮಾರಾಟಕ್ಕೆ ಶುಲ್ಕ ವಿಧಿಸಬಾರದು, ಪರವಾನಗಿ ಕಡ್ಡಾಯ ಮಾಡಬೇಕು. ನಿರಂತರ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರತಿ ಕಚೇರಿಯಲ್ಲೂ ‘ಕಾರ್ಯ ಸುಧಾರಣಾ ತಂಡ’ ರಚಿಸಬೇಕು ಎಂದು ವಿವರಿಸಲಾಗಿದೆ.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಎಸಿಎಸ್ ರಜನೀಶ್‌ ಗೋಯಲ್‌ ಹಾಗೂ ಆಯೋಗದ ಸಲಹೆಗಾರ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ವೈದ್ಯ: ಶೇ 10ರಷ್ಟು ಎನ್‌ಆರ್‌ಐ ಕೋಟಾ

ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾದ ಸೀಟುಗಳನ್ನು ಶೇ 5ರಿಂದ 10ರಷ್ಟು ಹೆಚ್ಚಳ ಮಾಡಬೇಕು ಎಂದು ಆಯೋಗ ವರದಿ ಹೇಳಿದೆ.

ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್‌, ಪುದುಚೇರಿ ರಾಜ್ಯಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾವನ್ನು ಒದಗಿಸುತ್ತಿವೆ. ರಾಜ್ಯದಲ್ಲೂ ಸೀಟುಗಳ ಸಂಖ್ಯೆ ಹೆಚ್ಚಿಸಬೇಕು. ಹೆಚ್ಚಿನ ಶುಲ್ಕ ವಿಧಿಸಬೇಕು. ಸಂಗ್ರಹವಾದ ಹಣವನ್ನು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ನೀಡಲಾಗಿದೆ.

ಕೆಪಿಎಸ್‌ಸಿ ಸದಸ್ಯರ ಸಂಖ್ಯೆ 8ಕ್ಕೆ ಇಳಿಕೆ

ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಸದಸ್ಯರ ಸಂಖ್ಯೆಯನ್ನು 8ಕ್ಕೆ ಇಳಿಸುವಂತೆ ಆಯೋಗ ಶಿಫಾರಸು ಮಾಡಿದೆ.

ದೇಶದ ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳ ಸಂಖ್ಯೆ 8 ಅಥವಾ ಅದಕ್ಕಿಂತ ಕಡಿಮೆ ಇದೆ. ಕೇರಳದ ಆಯೋಗವು ಜಿಲ್ಲಾಮಟ್ಟದ ಕಚೇರಿಗಳನ್ನು ಹೊಂದಿದೆ. ರಾಜ್ಯದಲ್ಲಿ ಮಾತ್ರ ಸದಸ್ಯರ ಸಂಖ್ಯೆ 14 ಇದೆ.

ನೇಮಕಾತಿ ಪ್ರಕ್ರಿಯೆಗಳಲ್ಲಿ ದಾಖಲಾತಿ ಪರಿಶೀಲನಾ ಕಾರ್ಯವನ್ನು ಆಯಾ ಇಲಾಖೆಗಳೇ ಮಾಡಬೇಕು. ಇದರಿಂದ ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.