ADVERTISEMENT

ಶ್ರುತಿ ಹರಿಹರನ್ ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 18:00 IST
Last Updated 22 ಅಕ್ಟೋಬರ್ 2018, 18:00 IST
   

ಬೆಂಗಳೂರು: ನಟಿ ಶ್ರುತಿ ಹರಿಹರನ್‌ ವಿರುದ್ಧ ಫೇಸ್‌ಬುಕ್‌ನಲ್ಲಿ ಮಾಡುತ್ತಿರುವ ಕೀಳು ಅಭಿರುಚಿಯ ಟೀಕೆಯ ವಿರುದ್ಧ ಅದೇ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

‘ನಿಮ್ಮ ಸಹಮತವಿದ್ದರೆ ನಿಮ್ಮ ಹೆಸರು ಸೇರಿಸಿ ದಯವಿಟ್ಟು ಶೇರ್‌ ಮಾಡಿ, ಹೆಚ್ಚು ಜನರಿಗೆ ತಲುಪಿಸಿ. ನಮ್ಮ ಸಣ್ಣ ಸಿನಿಕತೆಗಳನ್ನು ಸದ್ಯಕ್ಕೆ ಮರೆತು ಬಿಡೋಣ...’ ಎನ್ನುವ ಒಕ್ಕಣೆಯೊಂದಿಗೆ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಆರಂಭಿಸಿದ ಅಭಿಯಾನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಚಿತ್ರ ನಿರ್ದೇಶಕ ಬಿ. ಸುರೇಶ, ಬೊಳುವಾರು ಮಹಮದ್ ಕುಂಞಿ, ಡಾ.ವಿಜಯಾ, ಚೇತನಾ ತೀರ್ಥಹಳ್ಳಿ, ಸಂಧ್ಯಾರಾಣಿ, ಉಷಾ ಪಿ. ರೈ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ

‘ಮೀ–ಟೂ’ ಅಭಿಯಾನದ ಭಾಗವಾಗಿ ಶ್ರುತಿ ಹರಿಹರನ್ ತಮ್ಮ ಕೆಲವು ಅನುಭವಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಅವರ ಪೋಸ್ಟ್‌ಗೆ ಬಂದಿರುವ ಮುನ್ನೂರಕ್ಕೂ ಹೆಚ್ಚು ಪ್ರತಿಕ್ರಿಯೆಗಳಲ್ಲಿ ಬಳಸಲಾಗಿರುವ ಭಾಷೆ ಮತ್ತು ಧಾಟಿಯು ದೌರ್ಜನ್ಯದ ವಿರುದ್ಧ ಮಾತಾಡುವ ಹೆಣ್ಣುಗಳ ದನಿಯನ್ನೇ ಅಡಗಿಸುವಂತಿದೆ’ ಎಂದು ಅಭಿಯಾನದ ಬರಹ ಆತಂಕ ವ್ಯಕ್ತಪಡಿಸಿದೆ.

ADVERTISEMENT

634ಕ್ಕಿಂತ ಹೆಚ್ಚು ಪ್ರತಿಕ್ರಿಯೆಗಳು

ಶ್ರುತಿ ಅವರ ಫೇಸ್‌ ಬುಕ್‌ ಪೋಸ್ಟ್‌ಗೆ 634ಕ್ಕಿಂತ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಈ ಪೈಕಿ ಬಹುತೇಕರು ಅವರ ವಿರುದ್ಧ ಅಶ್ಲೀಲ, ಕೊಳಕು ಭಾಷೆಯಲ್ಲಿ ಬೈದಿದ್ದಾರೆ.

‘ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ’ ಎಂದು ಪ್ರಶಾಂತ್ ಎಂಬುವರು ಟೀಕೆ ಮಾಡಿದ್ದರೆ, ‘ಪ್ರತಿಭಾವಂತ ನಟಿಯಾದ ನಿಮ್ಮ ಮೇಲೆ ಗೌರವ ಇದೆ. ಇಷ್ಟು ಕೀಳುಮಟ್ಟದ ಆರೋಪವನ್ನು ಸರ್ಜಾ ವಿರುದ್ಧ ಮಾಡಬಾರದಿತ್ತು’ ಎಂದು ದೀಪ್ ಶೆಟ್ಟಿ ಎಂಬುವರು ಹೇಳಿದ್ದಾರೆ.

‘ಕೆಲವರಂತೂ ಕೊಳಕು ಭಾಷೆಯಲ್ಲಿ ಯಾಕೆ ಮಾತಾಡುತ್ತೀರಿ? ಕಮೆಂಟ್ ಮಾಡುವಾಗ ಕಾಮನ್ ಸೆನ್ಸ್ ಇರಲಿ. ನಮಗೆ ಯಾರೊಬ್ಬರ ವೈಯಕ್ತಿಕ ಬದುಕಿನ ಬಗ್ಗೆಯೂ ಗೊತ್ತಿರದಿದ್ದಾಗ ತಾಳ್ಮೆಯಿಂದ ಇರೋಣ. ಸತ್ಯ ಗೊತ್ತಾಗುತ್ತದೆ’ ಎಂದು ಮುತ್ತುರಾಜು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.