ADVERTISEMENT

VB-G RAM G | ಸಿದ್ಧವಾಗದ ಕ್ರಿಯಾ ಯೋಜನೆ: ಗ್ರಾಮೀಣ ‘ಉದ್ಯೋಗ’ಕ್ಕೆ ಗ್ರಹಣ

ಚಂದ್ರಹಾಸ ಹಿರೇಮಳಲಿ
Published 23 ಫೆಬ್ರುವರಿ 2026, 23:43 IST
Last Updated 23 ಫೆಬ್ರುವರಿ 2026, 23:43 IST
ಮಣ್ಣು ಹೊರುವ ಮೂಲಕ ಚಿಕ್ಕಬಳ್ಳಾಪುರದಲ್ಲಿ ನಡೆದ ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಚಾಲನೆ ನೀಡಿದರು
ಮಣ್ಣು ಹೊರುವ ಮೂಲಕ ಚಿಕ್ಕಬಳ್ಳಾಪುರದಲ್ಲಿ ನಡೆದ ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಚಾಲನೆ ನೀಡಿದರು    

ಬೆಂಗಳೂರು: ನರೇಗಾ ರದ್ದುಪಡಿಸಿ, ಅದರ ಬದಲಿಗೆ ಕೇಂದ್ರ ಸರ್ಕಾರ ರೂಪಿಸಿರುವ ‘ವಿಬಿ ಜಿ ರಾಮ್‌ ಜಿ’ ಯೋಜನೆಯನ್ನು 2026–27ನೇ ಸಾಲಿನಿಂದ ಜಾರಿಗೊಳಿಸಲು ಅಗತ್ಯ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸದ ಕಾರಣ ಗ್ರಾಮೀಣ ಜನರಿಗೆ ಉದ್ಯೋಗದ ‘ಖಾತ್ರಿ’ ಅನಿಶ್ಚಿತವಾಗಿದೆ.

ನರೇಗಾ ಯೋಜನೆಯನ್ನು ಬರುವ ಆರ್ಥಿಕ ವರ್ಷದಲ್ಲಿ ಅನುಷ್ಠಾನಗೊಳಿಸುವ ಕುರಿತು ಆಯಾ ಪಂಚಾಯಿತಿಗಳು ಅಗತ್ಯ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ 2025ರ ಸೆಪ್ಟೆಂಬರ್‌ನಲ್ಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅದೇ ವರ್ಷದ ಅಕ್ಟೋಬರ್‌ 2ರಿಂದ ಸಿದ್ಧತಾ ಕಾರ್ಯ ಆರಂಭಿಸಿ, 2026ರ ಫೆಬ್ರುವರಿ 20ರ ಒಳಗೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ನರೇಗಾ ಯೋಜನೆಯೇ ರದ್ದಾದ ಕಾರಣ ಕ್ರಿಯಾ ಯೋಜನೆಯ ಪ್ರಕ್ರಿಯೆಗಳು ಸ್ಥಗಿತವಾಗಿವೆ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ, ‘ನರೇಗಾ ಬಚಾವೋ’ ಆಂದೋಲನ ಹಮ್ಮಿಕೊಂಡಿರು
ವುದರಿಂದಾಗಿ, ಮುಂದೇನು ಮಾಡಬೇಕೆಂಬ ದಿಕ್ಕು ತೋಚದ ಸ್ಥಿತಿಯಲ್ಲಿ ಅಧಿಕಾರಿಗಳಿದ್ದಾರೆ.

ಕೇಂದ್ರ ಸರ್ಕಾರ 2005ರಲ್ಲಿ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ’ ಕಾಯ್ದೆಯನ್ನು ಜಾರಿಗೆ ತಂದಿತು. 2006ರಲ್ಲಿ ಕಾರ್ಯರೂಪಕ್ಕೆ ತರಲಾಯಿತು.

ADVERTISEMENT

2009ರಲ್ಲಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಎಂದು ಮರು ನಾಮಕರಣ ಮಾಡಲಾಯಿತು. ಎರಡು ದಶಕಗಳು ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ 100 ದಿನಗಳು ಉದ್ಯೋಗ ನೀಡುವ ಜತೆಗೆ, ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಕೆರೆ ಸಂರಕ್ಷಣೆ, ಶೌಚಾಲಯಗಳ ನಿರ್ಮಾಣ, ಹೊಲ, ತೋಟದ ಕೆಲಸಗಳು, ಜಾನುವಾರು ಕೊಟ್ಟಿಗೆಗಳು, ಶಾಲಾ, ಅಂಗನವಾಡಿ ಕಟ್ಟಡಗಳು ಸೇರಿದಂತೆ ಹಲವು ಆಸ್ತಿಗಳನ್ನು ಸೃಜಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆಡಳಿತಾತ್ಮಕ ವೆಚ್ಚದ ರೂಪದಲ್ಲಿ ಶೇ 10ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನೀಡುತ್ತಿತ್ತು.

ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಈಗ ನರೇಗಾ ಹೆಸರು ಬದಲಿಸಿ, ‘ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಮೊದ ಲಿದ್ದ 100 ದಿನಗಳನ್ನು 125 ದಿನಗಳಿಗೆ ಹೆಚ್ಚಿಸಿದೆ.

ಕೇಂದ್ರ ಹಾಗೂ ರಾಜ್ಯದ ಪಾಲನ್ನು 60:40ರ ಅನುಪಾತದಲ್ಲಿ ನಿಗದಿ ಮಾಡಿದೆ. 2026–27ನೇ ಹಣಕಾಸು ವರ್ಷದಲ್ಲಿ ಯೋಜನೆಗೆ ಇಡೀ ದೇಶಕ್ಕೆ ₹1.51 ಲಕ್ಷ ಕೋಟಿ ನಿಗದಿ ಮಾಡಿದ್ದು, ಇದರಲ್ಲಿ ₹95,600 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿದೆ.

ಹೊಸ ಕಾಯ್ದೆಯನ್ನು ಕರ್ನಾಟಕ ತೀವ್ರವಾಗಿ ವಿರೋಧಿಸಿದ್ದು, ಅದಕ್ಕಾಗಿ ವಿಶೇಷ ಅಧಿವೇಶನ ಕರೆದಿತ್ತು. ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವು ಉಭಯ ಸದನಗಳಲ್ಲಿ ಅಂಗೀಕಾರಗೊಂಡಿತ್ತು.

‘ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿರುವ ಕಾರಣ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ತನ್ನ ಪಾಲಿನ ಶೇ 40ರಷ್ಟು ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿಟ್ಟರೆ ಮಾತ್ರ ವರ್ಷದ ಮಧ್ಯದ ಅವಧಿಯಲ್ಲಾದರೂ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ಮಾಡಬಹುದು. ಇಲ್ಲದಿದ್ದರೆ ಅದೂ ಸಾಧ್ಯವಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ. 

ಕ್ರಿಯಾ ಯೋಜನೆ ಸಿದ್ಧವಾಗದೆ ಇರುವುದು ಗ್ರಾಮೀಣ ಕೂಲಿ ಕಾರ್ಮಿಕರ ಭವಿಷ್ಯವನ್ನೇ ಮಂಕಾಗಿಸಿದೆ ಕೇಂದ್ರ, ರಾಜ್ಯ ಸರ್ಕಾರಗಳು ಹಗೆತನ ಬಿಟ್ಟು ಯೋಜನೆ ಜಾರಿಗೊಳಿಸಬೇಕು
ಕಾಡಶೆಟ್ಟಿಹಳ್ಳಿ ಸತೀಶ್, ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ 

ಬಾಕಿ ಕೆಲಸ ತ್ವರಿತಕ್ಕೆ ಸೂಚನೆ

ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 2025–26ನೇ ಸಾಲಿನಲ್ಲಿ ಕೈಗೊಂಡಿದ್ದ ನರೇಗಾ ಯೋಜನೆಯ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ.

ನರೇಗಾ ಯೋಜನೆಯಡಿ ಇದುವರೆಗೆ ಸೃಜಿಸಲಾದ ಮಾನವ ದಿನಗಳನ್ನು ಪರಿಶೀಲಿಸಿ, ಪ್ರಸ್ತುತ ಕೂಲಿಕಾರರ ಬೇಡಿಕೆ ಎಷ್ಟಿದೆ ಎಂಬ ವಾಸ್ತವ ಲೆಕ್ಕಾಚಾರಗಳ ಆಧಾರದಲ್ಲಿ ಮರುಮೌಲ್ಯಮಾಪನ ಮಾಡಿಕೊಳ್ಳಬೇಕು. ಪಿಡಿಒಗಳೊಂದಿಗೆ ಸಭೆ ನಡೆಸಿ, ನಿಖರ ಮಾಹಿತಿ ಕಲೆಹಾಕಬೇಕು. ಸದಸ್ಯಕ್ಕೆ 10 ಕಾಮಗಾರಿಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಬೇಕು ಎಂದು ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒಗಳು ಸೂಚಿಸಿದ್ದಾರೆ.

ರಸ್ತೆ, ಕಾಂಪೌಂಡ್‌ ಸೇರಿದಂತೆ ಗ್ರಾಮೀಣ ಆಸ್ತಿಗಳ ಸೃಜನೆಗೆ ಪ್ರಸ್ತುತ ಲಭ್ಯ ಇರುವ ಇತರೆ ಯೋಜನೆಗಳನ್ನು ಬಳಸಿಕೊಳ್ಳುವ ಕುರಿತು ನಿಖರ ವರದಿಯನ್ನು ಆಯುಕ್ತರಿಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. 

7,000 ಸಿಬ್ಬಂದಿ ಕೆಲಸಕ್ಕೆ ಕುತ್ತು
ನರೇಗಾ ಯೋಜನೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 7,000ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಯೋಜನೆ ಸ್ಥಗಿತವಾದರೆ ಎಲ್ಲರೂ ಕೆಲಸ ಕಳೆದುಕೊಳುವ ಭೀತಿ ಎದುರಿಸುತ್ತಿದ್ದಾರೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಾದ ಎಂಜಿನಿಯರ್‌, ತಾಂತ್ರಿಕ ತಜ್ಞರು, ಯೋಜನಾ ಸಂಯೋಜಕರು, ನಿರ್ವಾಹಕರು, ದೂರು ನಿರ್ವಹಣಾ ಸಿಬ್ಬಂದಿಗಳು ಸೇರಿದಂತೆ ವಿವಿಧ ಹಂತದ ಸಿಬ್ಬಂದಿ ಹಲವು ವರ್ಷಗಳಿಂದ ಹೊರ ಗುತ್ತಿಗೆ ಆಧಾರದಲ್ಲೇ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ‘ನರೇಗಾ ಯೋಜನೆಯನ್ನೇ ನಂಬಿಕೊಂಡು ಕೆಲಸ ಮಾಡುತ್ತಿದ್ದೇವೆ. 5 ತಿಂಗಳಿಂದ ವೇತನವೂ ಪಾವತಿಯಾಗಿಲ್ಲ. ಮುಂದಿನ ಹಣಕಾಸು ವರ್ಷಕ್ಕೆ ಸೇವೆ ಮುಂದುವರಿಯುವ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ತಾಂತ್ರಿಕ ತಜ್ಞ ರಮೇಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.