
ಬೆಂಗಳೂರು: ನರೇಗಾ ಯೋಜನೆಯ ಬದಲಾವಣೆ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಶೇ 40ರಷ್ಟು ಆರ್ಥಿಕ ಹೊರೆ ಹಾಕಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ₹20,000 ಕೋಟಿ ವೆಚ್ಚ ಮಾಡಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಯೋಜನೆಯಲ್ಲಿ ಇದುವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗಳನ್ನು ನಿರ್ಮಾಣ ಮಾಡಬಹುದಾಗಿತ್ತು. ಗ್ರಾಮಸ್ಥರಿಗೆ ಹಾಗೂ ಪಂಚಾಯ್ತಿಗಳಿಗೆ ಏನು ಬೇಕು ಎಂದು ಗ್ರಾಮಸಭೆಗಳಲ್ಲಿ ನಿರ್ಧಾರ ಮಾಡಬಹುದಿತ್ತು. ಕಳೆದ ಎರಡೂವರೆ ವರ್ಷದಲ್ಲಿ 17 ಲಕ್ಷ ಹಳ್ಳಿಗಳಲ್ಲಿ ಆಸ್ತಿ ಸೃಜನೆ ಮಾಡಲಾಗಿದೆ. 80 ಲಕ್ಷ ಕುಟುಂಬಗಳಿಗೆ ಜೀವನೋಪಾಯ ನೀಡಲಾಗಿದೆ. ಅದಕ್ಕಾಗಿ ₹21,144 ಕೋಟಿ ವೆಚ್ಚ ಮಾಡಿದ್ದೇವೆ. ಕೇಂದ್ರದ ಹೊಸ ಕಾಯ್ದೆಯಿಂದಾಗಿ ರಾಜ್ಯಗಳ ಮೇಲೆ ಭಾರಿ ಆರ್ಥಿಕ ಒತ್ತಡ ಬೀಳಲಿದೆ. ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ಎರಡು ದಶಕಗಳಿಂದ ಗ್ರಾಮಿಣ ಜನರಿಗೆ ಉದ್ಯೋಗದ ಗ್ಯಾರಂಟಿ ನೀಡಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಆ ಮೂಲಕ ಜೀವನೋಪಾಯದ ಹಕ್ಕು, ಪಂಚಾಯಿತಿಗಳ ಹಕ್ಕು ಕಸಿದುಕೊಂಡಿದೆ. ಹೊಸ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಕೆಲಸ ನೀಡಲಾಗುತ್ತದೆ. ಯಾವ ಭಾಗದಲ್ಲಿ ಕೆಲಸ ನೀಡಬೇಕು ಎನ್ನುವುದನ್ನು ಕೇಂದ್ರವೇ ನಿರ್ಧರಿಸುತ್ತದೆ. ಒಬ್ಬ ವ್ಯಕ್ತಿ ಉದ್ಯೋಗ ಖಾತರಿ ಕಾರ್ಡ್ ಹೊಂದಿದ್ದರೆ ಆತ ಎಲ್ಲಿ ಬೇಕಾದರೂ ಕೆಲಸ ಮಾಡುವ ಅವಕಾಶವಿತ್ತು. ಈಗ ಈ ಅವಕಾಶವನ್ನು ಕಸಿದುಕೊಳ್ಳಲಾಗಿದೆ. ದೇಶದ ಎಲ್ಲ ರಾಜ್ಯಗಳ ಗ್ರಾಮೀಣ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಸಿದ ಹೋರಾಟದಂತೆ ಬೀದಿಗಿಳಿಯಲಿದ್ದಾರೆ’ ಎಂದರು.
‘ಕೇಂದ್ರ ಸರ್ಕಾರ ಗಾಂಧೀಜಿ ಅವರ ಹೆಸರು ತೆಗೆದಿದೆ ಎಂಬ ಅಂಶವನ್ನಷ್ಟೇ ಕಾಂಗ್ರೆಸ್ ವಿರೋಧ ಮಾಡುತ್ತಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ಗೆ ಗಾಂಧೀಜಿ ಮೇಲೆ ದ್ವೇಷ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ದ್ವೇಷವನ್ನು ಗ್ರಾಮೀಣ ಜನರ ಮೇಲೆ ತೀರಿಸಿಕೊಳ್ಳುತ್ತಿರುವುದೇಕೆ? ಬಿಜೆಪಿ, ಸಂಘ ಪರಿವಾರಕ್ಕೆ ನಾಥುರಾಮ್ ಗೋಡ್ಸೆ ಇಷ್ಟವಾದರೆ, ಉದ್ಯೋಗ ಖಾತರಿ ಯೋಜನೆಗೆ ‘ವಿಬಿ ಜಿ ರಾಮ್ ಜಿ’ ಬದಲು ‘ಜಿ ನಾಥುರಾಮ್ ಜಿ’ ಅಂತಲೇ ಹೆಸರಿಡಲಿ, ಆದರೆ ಜನರ ಬದುಕನ್ನು ಕಸಿದುಕೊಳ್ಳುವುದು ಬೇಡ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.