ADVERTISEMENT

ಮೇಕೆದಾಟು| ಕಾಂಗ್ರೆಸ್ ಹೊಣೆಗೇಡಿತನದ ಸಾಕ್ಷ್ಯ ಶೀಘ್ರ ಬಿಡುಗಡೆ: ಸಚಿವ ಕಾರಜೋಳ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 17:12 IST
Last Updated 1 ಜನವರಿ 2022, 17:12 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ‘ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೋರಿದ ಹೊಣೆಗೇಡಿತನಕ್ಕೆ ಸಾಕ್ಷ್ಯಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಾಜ್ಯದ ಹಿತದೃಷ್ಟಿಯಿಂದ ಮತ್ತು ರಾಜ್ಯದ ಜನರಿಗೆ ಸತ್ಯ ವಿಷಯವನ್ನು ಗಮನಕ್ಕೆ ತರುವ ಉದ್ದೇಶದಿಂದ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲಾಗುವುದು’ ಎಂದರು.

‘ಅಂದು ಕೃಷ್ಣೆಗೆ (ಕೂಡಲ ಸಂಗಮ) ಪಾದಯಾತ್ರೆ ನಡೆಸಿ, ಇಂದು ಕಾವೇರಿಗೆ (ಮೇಕೆದಾಟು) ಪಾದಯಾತ್ರೆ ನಡೆಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ಮಿತ್ರರು, ಅಧಿಕಾರದಲ್ಲಿ ಇದ್ದಾಗ ಮೇಕೆದಾಟು ಯೋಜನೆಯ ಕುರಿತು ತೋರಿಸಿದ್ದ ಹೊಣೆಗೇಡಿ ತನಕ್ಕೆ ಸಾಕ್ಷ್ಯಗಳು ನಮ್ಮಲ್ಲಿವೆ. ಕೆಲವೇ ದಿನಗಳಲ್ಲಿ ಕೆಲವು ಸ್ಫೋಟಕ ಮಾಹಿತಿಗಳನ್ನು ಹೊರಹಾಕುತ್ತೇನೆ’ ಎಂದರು.

ADVERTISEMENT

‘ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಮತ್ತು ರಾಜಕೀಯ ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ. 2013ರ ಜ. 7ರಿಂದ ಜ. 14ರವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಗಿಮಿಕ್ ಮಾಡಿದ್ದರು’ ಎಂದು ಟೀಕಿಸಿದರು. ‘ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಕಡತ ವಿಲೇವಾರಿ ಮಾಡದೆ ಕಾಲಹರಣ ಮಾಡುವುದು, ವಿರೋಧ ಪಕ್ಷದಲ್ಲಿ ಬಂದಾಗ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್‌ನವ ಜಾಯಮಾನ. ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರಮತ್ತು ಜನಹಿತದ ಕೆಲಸಗಳನ್ನು ವಿಳಂಬ ದ್ರೋಹದ ಮೂಲಕ ಮುಂದೂಡಿ ಈಗ ಪಾದಯಾತ್ರೆ ಮೂಲಕ ಕಾಂಗ್ರೆಸ್‌ಗಿಮಿಕ್ ಮಾಡುತ್ತಿದೆ’ ಎಂದೂ ಟೀಕಿಸಿದರು.

ಪಾದಯಾತ್ರೆಗೆ ಅನುಮತಿ ಏಕೆ– ಡಿಕೆಶಿ

ಬೆಂಗಳೂರು: ‘ಪಾದಯಾತ್ರೆಗೆ ಗೃಹ ಸಚಿವರ ಅನುಮತಿಯೂ ಬೇಡ, ರಕ್ಷಣೆಯೂ ಬೇಡ. ಯಾರಾದ್ರೂ ಕೋಳಿ ಕೇಳಿ ಮಸಾಲೆ ಅರಿತಾರಾ’ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇವೇಗೌಡರು, ಚಂದ್ರಶೇಖರ್‌ ಪಾದಯಾತ್ರೆ ನಡೆಸಿದಾಗ ಸ್ಟ್ಯಾಂಪ್‌ ಹಾಕಿ ಅನುಮತಿ ಕೊಟ್ಟಿದ್ದರಾ’ ಎಂದೂ ಪ್ರಶ್ನಿಸಿದರು.

‘ಗೃಹ ಸಚಿವರು ವಯಸ್ಸಿನಲ್ಲಿ ದೊಡ್ಡವರಿರಬಹುದು. ಆದರೆ, ರಾಜಕೀಯದಲ್ಲಿ ಎಳಸು’ ಎಂದು ಆರಗ ಜ್ಞಾನೇಂದ್ರ ಅವರನ್ನು ಲೇವಡಿ ಮಾಡಿದ ಶಿವಕುಮಾರ್‌, ‘ಪಾದಯಾತ್ರೆಗೆ ಗೃಹ ಸಚಿವರು ಬಂದರೆ, ಅವರಿಗೆ ಬ್ಯಾಲದ ಹಣ್ಣಿನ ಪಾನಕ ಕುಡಿಸಿ ಕಳಿಸುತ್ತೇವೆ. ರಾಮ ರಸ ಅಲ್ಲ, ಪಾನಕ ಕುಡಿಸಿ ಕಳುಹಿಸುತ್ತೇವೆ’ ಎಂದರು.

‘ಪಾದಯಾತ್ರೆ ವಿಚಾರದಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಪಾದಯಾತ್ರೆಯಲ್ಲಿ 4–5 ಆಂಬ್ಯುಲೆನ್ಸ್‌ಗಳು ಇರುತ್ತವೆ. ಎಳೆನೀರು ಕೊಡಲು ಮಂಡ್ಯ, ಮದ್ದೂರು ಜನ ಇರುತ್ತಾರೆ. ನೂರೋ, ಐನೂರೋ ಅಥವಾ ಐದು ಸಾವಿರ ಜನ ಬರುತ್ತಾರೋ ಎಲ್ಲರಿಗೂ ಆಹ್ವಾನ ಕೊಡುತ್ತಿದ್ದೇವೆ. ಯಾರಿಗೂ ಬಲವಂತ ಇಲ್ಲ’ ಎಂದರು.

ಕಾಂಗ್ರೆಸ್‌ನವರು ಮೈ ಪರಚಿಕೊಳ್ಳುತ್ತಿದ್ದಾರೆ: ಅಶೋಕ

ಬೆಂಗಳೂರು: ‘ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನವರು ಮೇಕೆದಾಟು ಯೋಜನೆಗೆ ಏನೂ ಮಾಡಲಿಲ್ಲ. ಈಗ ಮಾಡಲು ಕೆಲಸವಿಲ್ಲ. ಹೀಗಾಗಿ ಪಾದಯಾತ್ರೆ ನಡೆಸಲು ಹೊರಟಿದ್ದಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೇಕೆದಾಟು ಬಗ್ಗೆ ಈಗ ಕಾಂಗ್ರೆಸ್‌ನವರು ಮೈ ಪರಚಿಕೊಳ್ಳುತ್ತಿದ್ದಾರೆ. ಅವರಿಗೆ ನಿಜವಾಗಿ ಕಾಳಜಿ ಇದ್ದರೆ ಅಧಿಕಾರದಲ್ಲಿ ಇದ್ದಾಗಲೇ ಮಾಡುತ್ತಿದ್ದರು. ಯೋಜನೆ ಡಿಪಿಆರ್ ಮಾಡಲು ಆರು ವರ್ಷ ಬೇಕಿತ್ತಾ’ ಎಂದು ಶನಿವಾರ ಪ್ರಶ್ನಿಸಿದರು.

‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹಿಂದೆ ಪಾದಯಾತ್ರೆ ಮಾಡಿದ್ದರು. ಅಲ್ಲಿ ನೀರೇ ಬತ್ತಿ ಹೋಯಿತು. ಈಗ ಮೇಕೆದಾಟು ಕೂಡ ಅದೇ ಪರಿಸ್ಥಿತಿಗೆ ಬಂದಿದೆ. ಕಾಂಗ್ರೆಸ್‌ನವರ ಪಾದಯಾತ್ರೆಯಿಂದ ಜನರಿಗೆ ಅನುಕೂಲ ಆಗುವುದಿಲ್ಲ. ಅವರ ಪಕ್ಷಕ್ಕೆ ಅನುಕೂಲ ಮಾಡಿಕೊಳ್ಳಲು ಮಾಡುತ್ತಾರೆ ಅಷ್ಟೇ. ಇಷ್ಟು ದಿನ ಏನು ಕಡಲೆಕಾಯಿ ತಿನ್ನುತ್ತಿದ್ದರಾ’ ಎಂದೂ ತರಾಟೆಗೆ ತೆಗೆದುಕೊಂಡರು.

ಇವುಗಳನ್ನೂಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.