ADVERTISEMENT

ಡಿ.ಕೆ. ಶಿವಕುಮಾರ್ AICC ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು: ಸಚಿವ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 9:16 IST
Last Updated 17 ಫೆಬ್ರುವರಿ 2025, 9:16 IST
   

ಬೆಂಗಳೂರು: 'ನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಅವರು ( ಡಿ.ಕೆ. ಶಿವಕುಮಾರ್) ಎಐಸಿಸಿ ಹೇಳಿದೆ ಎಂದು ಎಲ್ಲದಕ್ಕೂ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು' ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ' ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಣ್ಣ, 'ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪ ಅಲ್ಲ, ವಾಸ್ತವ' ಎಂದರು.

'ನಾನು ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಂಡಿಲ್ಲ. ನಾನು ಅವರ ಹೆಸರು ದುರ್ಬಳಕೆ ಮಾಡಿಕೊಂಡು ಸದಾಶಿವ ನಗರ, ಡಾಲರ್ಸ್ ಕಾಲೋನಿಯಲ್ಲಿ ಎರಡೆರಡುಮನೆ ಕಟ್ಟಿದೀನಾ? ಅವರ ಹೆಸರು ದರ್ಬಳಕೆ ಮಾಡಿಕೊಳ್ಳುವ ಅವಶ್ಯಕತೆ ನನಗಿಲ್ಲ' ಎಂದು ಗರಂ ಆದರು.

ADVERTISEMENT

'ನಾನು ಯಾರಿದಂಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ವಿಷಯ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ‌ ಬೀರುವುದು ಮಾತನಾಡಲ್ಲ' ಎಂದರು.

'ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು. ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ' ಎಂದರು.

'ಪೂರ್ಣಾವಧಿ, ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈಕಮಾಂಡ್ ತೀರ್ಮಾನ. ಸಿಎಲ್‌ಪಿ ಸಭೆಯಲ್ಲೇ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು. ಅವರು ಒಪ್ಪಿದ ಮೇಲೆ ಆಯಿತಲ್ಲವೇ' ಎಂದರು.

'ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಡಿಕಿಶಿಯವರ ಹೇಳಿಕೆ ಅಷ್ಟೆ. ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ. ಎಚ್ಚರಿಕೆ ಎಲ್ಲಾ ಯಾರು ಕೇಳುತ್ತಾರೆ' ಎಂದು ಪ್ರಶ್ನಿಸಿದರು.

'ನನಗೂ ಡಿ.ಕೆ. ಶಿವಕುಮಾರ್‌ಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರಬೇಧ ಇರಬಹುದು ಅಷ್ಟೆ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣವೆಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೇವೆ. ವಿಚಾರಭೇದ ಅಷ್ಟೆ. ವೈಯುಕ್ತಿಕ ಏನೂ ಇಲ್ಲ. ಅವರನ್ನು ಒಂದು ದಿನ ಊಟಕ್ಕೆ ಮನೆಗೆ ಕರೆಯುತ್ತೇನೆ' ಎಂದರು.

'ನಮಗೆ ಎಚ್ಚರಿಕೆ ನೀಡಲು ಜಿ.ಸಿ. ಚಂದ್ರಶೇಖರ್ ಯಾರು? ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ ಅವರಿಗೇನು ಎರಡು ಕೊಂಬು ಇದೆಯೇ? ಶಿಶುಪಾಲ ಕೃಷ್ಣ ಪುರಾಣ ಇದೆಲ್ಲಾ ನಾನು ನಂಬಲ್ಲ. ಪುರಾಣ ಎಲ್ಲ ಕಟ್ಟು ಕಥೆ. ಅವರೇ ಶಿಶುಪಾಲ' ಎಂದು ಟೀಕಿಸಿದರು

'ರಾಜ್ಯಸಭೆ, ವಿಧಾನಪರಿಷತ್ ಗೆ ಕಳುಹಿಸುವಂತವರು ಪಕ್ಷಕ್ಕೆ ಮತ ತಂದು ಕೊಡುವಂತಿರಬೇಕು. ಇಂಥವರು ಪಕ್ಷಕ್ಕೆ‌ ಹೊರೆ. ಅವರ ಹಿನ್ನಲೆ ಏನು..? ಪಾಲಿಕೆ ಚುನಾವಣೆಯಲ್ಲಿ ಅವರಿಗೆ ಎಷ್ಟು ಮತ ಬಂದಿದೆ? ಪಾಲಿಕೆ ಚುನಾವಣೆಯಲ್ಲಿ 258 ಮತ ಪಡೆದಿದ್ದರು. ಅವರೆಲ್ಲ ನಮಗೆ ಹೇಳುವುದು ಬೇಡ ಎಂದರು.

'ಸಚಿವ ಸಂಪುಟ ಪುನರ್ ರಚನೆ ಮುಖ್ಯಮಂತ್ರಿಯ ಪರಮಾಧಿಕಾರ. ಹೈಕಮಾಂಡ್ ಹೇಳಿದಾಗ ಪುನರ್ ರಚನೆ ಆಗುತ್ತದೆ ಸಚಿವರ ರಿಪೋರ್ಟ್ ಕಾರ್ಡ್ ಮೌಲ್ಯಮಾಪನ ಮಾಡಲಿ' ಎಂದರು.

'ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕಿತ್ತೊ ಅದನ್ನು ಹೇಳಿದ್ದೇನೆ. ಎಲ್ಲವನ್ನೂ ಬಹಿರಂಗ ಮಾಡಲು ಆಗಲ್ಲ. ಸಮಾವೇಶ ಯಾರ ವಿರುದ್ಧ ನಾವು ಮಾಡುತ್ತಿಲ್ಲ. ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಸಮಯ ಸಂದರ್ಭದ ಬಂದಾಗ ಸಮಾವೇಶ ಮಾಡುತ್ತೇವೆ. ಸಮಾವೇಶ ದಿನಾಂಕ ಇನ್ನೂ ನಿರ್ಧಾರ ಆಗಿಲ್ಲ.‌ ರಾಹುಲ್ ಗಾಂಧಿ ಹಾಗೂ ಖರ್ಗೆಯವರನ್ನು ಕರೆದು ಸಮಾವೇಶ ಮಾಡುತ್ತೇವೆ. ಶೋಷಿತ ವರ್ಗಗಳ ಸಂಘಟನೆಗಾಗಿ ಸಮಾವೇಶ ಮಾಡುತ್ತೇವೆ. ಇದು ಯಾರ ವಿರುದ್ಧ ಕೂಡ ಅಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.