ADVERTISEMENT

ದೇಶಿ ಶಿಕ್ಷಣದಲ್ಲಿ ವಿದೇಶಿ ವ್ಯವಸ್ಥೆ ತರುವುದು ಎಷ್ಟು ಸರಿ?ಕೇಂದ್ರಕ್ಕೆ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 10:14 IST
Last Updated 18 ಜನವರಿ 2025, 10:14 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಮೈಸೂರು: ‘ವಿದೇಶಗಳ ವ್ಯವಸ್ಥೆಯನ್ನು ನಮ್ಮ ದೇಶದ ಶಿಕ್ಷಣದಲ್ಲಿ ತಂದು ಅಳವಡಿಸುವುದು ಎಷ್ಟು ಸರಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಹಾಲ್‌ನಲ್ಲಿ ಶನಿವಾರ ನಡೆದ 105ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಿದೇಶದ್ದನ್ನು ಇಲ್ಲಿಗೆ ಬಂದು ಹೇರುವುದು ಫ್ಯಾಷನ್ ಆಗಿ ಹೋಗಿದೆ’ ಎಂದು ಟೀಕಿಸಿದರು.

‘ನಮ್ಮಲ್ಲಿ ಉಪನ್ಯಾಸಕರು, ಬೋಧಕರ ಕೊರತೆ ಸಾಕಷ್ಟು ಕಾಡುತ್ತಿದೆ. ವಿ.ವಿಗಳಲ್ಲಿ ಹಾಗೂ ಕಾಲೇಜು ಶಿಕ್ಷಣದಲ್ಲಿ ಅತಿಥಿ ಉಪನ್ಯಾಸಕರ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯಗಳ ಕೊರೆತೆ ದೊಡ್ಡ ಮಟ್ಟದಲ್ಲಿದೆ. ಈ ಸಮಸ್ಯೆಗಳನ್ನು ಪರಿಹರಿಸದೇ ವಿದೇಶಗಳ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಎಂಬುದನ್ನು ಅವಲೋಕಿಸಬೇಕಾಗಿದೆ’ ಎಂದು ಕೇಳಿದರು.

ADVERTISEMENT

‘ಶಿಕ್ಷಣದ ವಿಷಯದಲ್ಲಿ ಭದ್ರವಾದ ಬುನಾದಿಯನ್ನು ನಮ್ಮ ದೇಶದ ವ್ಯವಸ್ಥೆ ಕಲ್ಪಿಸಿದೆ. ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ರಾಜ್ಯ ಸರ್ಕಾರದ ಪಾಲೆಷ್ಟು, ಜವಾಬ್ದಾರಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ, ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಒಮ್ಮೆಲೆ ಕೆಲವು ಬದಲಾವಣೆಗಳನ್ನು ತರುವಂಥ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಲ್ಲಿನ ಜನರಿಗೆ ಉತ್ತರ ಕೊಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಆಗಿರುತ್ತದೆಯೇ ಹೊರತು ಕೇಂದ್ರ ಸರ್ಕಾರದ್ದಲ್ಲ’ ಎಂದರು.

‘ವಿದೇಶಗಳ ಶಿಕ್ಷಣ ವ್ಯವಸ್ಥೆಯಲ್ಲಿ ಅಷ್ಟೊಂದು ಉತ್ತಮವಾಗಿದ್ದ ಪಕ್ಷದಲ್ಲಿ, ನಮ್ಮಲ್ಲಿನ ಪದವೀಧರರು ವಿದೇಶಗಳಲ್ಲಿ ಅಷ್ಟು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತಾ?’ ಎಂದು ಕೇಳಿದರು.

‘ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಭದ್ರವಾದ ಬುನಾದಿ ನಮ್ಮಲ್ಲಿದೆ. ಕಾಲಕಾಲಕ್ಕೆ ಬೇಕಾದ ಸುಧಾರಣೆಗಳನ್ನೂ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಕುಳಿತವರು ರಾಜ್ಯಗಳ ವಿಶ್ವಾಸ ಗಳಿಸದೇ ಸರ್ವಾಧಿಕಾರಿ ಧೋರಣೆಯಲ್ಲಿ ಕ್ರಮ ಕೈಗೊಳ್ಳುವುದು ಸರಿಯಲ್ಲ. ವಿ.ವಿಗಳ ಸಿಬ್ಬಂದಿಗೆ ರಾಜ್ಯ ಸರ್ಕಾರ ವೇತನ, ಪಿಂಚಣಿ ಕೊಡುತ್ತಿದೆ. ಸೌಲಭ್ಯಗಳ್ನೂ ನಾವೇ ಕಲ್ಪಿಸುತ್ತಿದ್ದೇವೆ. ಏನೇ ಬದಲಾವಣೆ ಮಾಡುವಾಗಲೂ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಬೇಕು’ ಎಂದರು.

‘ಕಳೆದ 10 ವರ್ಷಗಳಿಂದ ಯುಜಿಸಿಯು ಹಲವು ಯೋಜನೆಗಳಿಗೆ ಅನುದಾನ ಕೊಡುವುದನ್ನು ನಿಲ್ಲಿಸಿದೆ. ಎಲ್ಲವನ್ನೂ ಕೇಂದ್ರ ಸರ್ಕಾರ ನಿಯಂತ್ರಿಸುತ್ತಿದೆ. ಇದು ಸರಿಯಲ್ಲ. ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಯೋಚಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.