ADVERTISEMENT

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಹೇರಿಕೆ ಸ್ವರೂಪದ್ದಲ್ಲ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:28 IST
Last Updated 8 ಆಗಸ್ಟ್ 2024, 16:28 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ತರಲು ಹೊರಟಿರುವ ನೀತಿಯು ಹೇರಿಕೆ ಸ್ವರೂಪದ್ದಾಗಿರುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ‘ಟೈ ಜಾಗತಿಕ ಶೃಂಗಸಭೆ–2024’ ಪೂರ್ವಭಾವಿ ಸಭೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ‘ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಕನ್ನಡಿಗರಿಗೆ ಮೀಸಲಾತಿ ನೀಡಿದರೆ, ಕೌಶಲಯುಕ್ತ ನೌಕರರ ಕೊರತೆ ಕಾಡಲಿದೆ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಆತಂಕಗಳನ್ನು ನಿವಾರಿಸುವ ಸಲುವಾಗಿ ಸಮಾಲೋಚನೆ ನಡೆಯುತ್ತಿದೆ’ ಎಂದರು.

ADVERTISEMENT

‘ಈ ಮೀಸಲಾತಿ ಜಾರಿಗೆ ತರುವುದಕ್ಕೂ ಮುನ್ನ, ಯುವಜನರಿಗೆ ಅಗತ್ಯ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ರಾಜ್ಯದಲ್ಲಿರುವ ಐಟಿಐ ಕೇಂದ್ರಗಳ ಮೂಲಕ ಕನ್ನಡಿಗರ ಯುವಜನರ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಕನ್ನಡಿಗರಲ್ಲಿ ಜಾಗತಿಕ ಮಟ್ಟದ ಉದ್ಯೋಗಾರ್ಹತೆ ಮತ್ತು ಕೌಶಲಮಟ್ಟವನ್ನು ಹೆಚ್ಚಿಸಲಾಗುತ್ತದೆ. ಇದರಿಂದ ಉದ್ಯಮಗಳಿಗೂ ತೊಡಕಾಗುವುದಿಲ್ಲ. ಕನ್ನಡಿಗರಿಗೆ ಉದ್ಯೋಗವಕಾಶ ಹೆಚ್ಚಳದ ಉದ್ದೇಶವೂ ಈಡೇರುತ್ತದೆ’ ಎಂದರು.

ಇದೇ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ‘ರಾಜ್ಯ ಸರ್ಕಾರದಿಂದ ವಿವಿಧ ನೆರವು ಮತ್ತು ವಿನಾಯತಿಗಳನ್ನು ಪಡೆದುಕೊಂಡಿರುವ ಖಾಸಗಿ ಕಂಪನಿಗಳು ಈಗಾಗಲೇ ಕನ್ನಡಿಗರಿಗೆ ಮೀಸಲಾತಿ ನೀಡುತ್ತಿವೆ. ಅಂತಹ ಕಾನೂನು ಈಗಾಗಲೇ ಜಾರಿಯಲ್ಲಿದೆ. ಯಾವುದೇ ನೆರವು ಪಡೆದುಕೊಳ್ಳದೇ ಇರುವ ಕಂಪನಿಗಳೂ ಸಾಕಷ್ಟು ಇದ್ದು, ಅವುಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಪ್ರಯತ್ನಿವಿದು. ಆದರೆ ಇದು ಹೇರಿಕೆ ಸ್ವರೂಪದ್ದಲ್ಲ’ ಎಂದರು.

‘ಈ ಸಂಬಂಧ ಮುಖ್ಯಮಂತ್ರಿ ಜತೆಗೆ ಸಮಾಲೋಚನೆ ನಡೆಸಲಾಗಿದೆ. ಉದ್ಯಮ ವಲಯದ ಪ್ರಮುಖರ ಜತೆಗೂ ಚರ್ಚೆ ನಡೆಸಲಾಗುತ್ತಿದೆ. ಯಾರಿಗೂ ತೊಡಕಾಗದ ರೀತಿಯಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.